ಹೆನ್ರಿಕ್ ಕ್ಲಾಸನ್ ಸ್ಪೋಟಕ ಶತಕ: ಇಂಗ್ಲೆಂಡ್ ಗೆ 400 ರನ್ ಬೃಹತ್ ಗುರಿ
ಮುಂಬೈ:ಇಲ್ಲಿನ ವಾಂಖೆಡೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯ ಇಂಗ್ಲೆಂಡ್ ಗೆಲುವಿಗೆ ದಕ್ಷಿಣ ಆಫ್ರಿಕಾ 400 ರನ್ ಗಳ ಬೃಹತ್ ಗುರಿ ನೀಡಿದೆ.
ಇಂಗ್ಲೆಂಡ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 399 ರನ್ ಗಳಿಸಿದೆ. ದಕ್ಷಿಣ ಆಫ್ರಿಕಾ ಪರ ಹೆನ್ರಿಕ್ ಕ್ಲಾಸನ್ 12 ಬೌಂಡರಿ 4 ಸಿಕ್ಸರ್ ಸಹಿತ 109 ಗಳಿಸುವ ಮೂಲಕ ಸ್ಪೋಟಕ ಶತಕ ಬಾರಿಸಿ ತಂಡ ಬೃಹತ್ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಬ್ಯಾಟಿಂಗ್ ಬಂದ ದಕ್ಷಿಣ ಆಫ್ರಿಕಾ ಮೊದಲ ಓವರ್ ನಲ್ಲಿಯೇ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್ 4 ರನ್ ಗೆ ರೀಸ್ ಟಾಪ್ಲಿ ಬೌಲಿಂಗ್ ನಲ್ಲಿ ಔಟ್ ಆಗುವ ಮೂಲಕ ಅಘಾತ ಎದುರಿಸಿತು. ಆರಂಭಿಕ ವಿಕೆಟ್ ಬೇಗ ಪತನದ ಹೊರತಾಗಿಯೂ ಚೇತರಿಸಿಕೊಂಡ ದಕ್ಷಿಣ ಆಫ್ರಿಕಾ ಭರ್ಜರಿ ಆಟ ಪ್ರದರ್ಶಿಸಿತು. ದ್ವಿತೀಯ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ರೀಝ ಹೆಂಡ್ರಿಕ್ಸ್ 9 ಬೌಂಡರಿ 3 ಸಿಕ್ಸರ್ ಸಹಿತ 85 ರನ್ ಬಾರಿಸಿದರೆ ಅವರಿಗೆ ಸಾಥ್ ನೀಡಿದ್ದ ರಸ್ಸಿ ವಾನ್ ಡರ್ ಡುಸ್ಸನ್ 8 ಬೌಂಡರಿ ಸಹಿತ 60 ರನ್ ಬಾರಿಸಿ ಕ್ರಮವಾಗಿ ಆದಿಲ್ ರಶೀದ್ ಗೆ ವಿಕೆಟ್ ಒಪ್ಪಿಸಿದರು.
ಬಳಿಕ ಬ್ಯಾಟಿಂಗ್ ಗೆ ಬಂದ ನಾಯಕ ಐಡೆನ್ ಮಾಕ್ರಮ್ 42 ರನ್ ಗಳಿಸಿರುವಾಗ ರೀಸ್ ಟಾಪ್ಲಿ ಬೌಲಿಂಗ್ ನಲ್ಲಿ ಬೈರ್ ಸ್ಟೋವ್ ಹಿಡಿದ ಉತ್ತಮ ಕ್ಯಾಚ್ ಗೆ ಔಟ್ ಆಗಿ ಇನ್ನಿಂಗ್ಸ್ ಮುಗಿಸಿದರು. ತಂಡದ ಮೊತ್ತ ಹೆಚ್ಚಿಸುವ ಜವಾಬ್ದಾರಿ ಹೊತ್ತಿದ್ದ ಡೇವಿಡ್ ಮಿಲ್ಲರ್ ಕೇವಲ 5 ರನ್ ಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ಪೆವಿಲಿಯನ್ ಸೇರಿದರು. ಐದನೇ ಕ್ರಮಾಂಕ ದಲ್ಲಿ ಬ್ಯಾಟಿಂಗ್ ಬಂದ ಅನುಭವಿ ಬ್ಯಾಟರ್ ಹೆನ್ರಿಕ್ ಕ್ಲಾಸನ್ 109 ರನ್ ಸ್ಪೋಟಕ ಶತಕ ಬಾರಿಸಿ ತಂಡದ ಮುನ್ನೂರ ಐವತ್ತರ ಗಡಿ ದಾಟಿಸಿದರು. ಮಾರ್ಕೋ ಜಾನ್ಸನ್ (77 ರನ್) ಜೊತೆ ಸೇರಿ ಕ್ಲಾಸನ್ ಭರ್ಜರಿ 151 ರನ್ ಜೊತೆಯಾಟ ಆಡಿದರು.
ಇಂಗ್ಲೆಂಡ್ ಪರ ರೀಸ್ ಟಾಪ್ಲಿ 3 ವಿಕೆಟ್ ಪಡೆದರೆ ಆದಿಲ್ ರಶೀದ್, ಗಸ್ ಅಟ್ಕಿನ್ಸನ್ ತಲಾ 2 ವಿಕೆಟ್ ಕಬಳಿಸಿದರು.