ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್: ಸ್ವರ್ಣ ಉಳಿಸಿಕೊಂಡ ಸಚಿನ್ ಖಿಲಾರಿ

Update: 2024-05-22 16:21 GMT

 ಸರ್ಜೆರಾವ್ ಖಿಲಾರಿ | PC : PTI  

ಕೋಬೆ(ಜಪಾನ್): ವಿಶ್ವ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಸಚಿನ್ ಸರ್ಜೆರಾವ್ ಖಿಲಾರಿ ಪುರುಷರ ಶಾಟ್ಪುಟ್ ಎಫ್ 46 ವಿಭಾಗದಲ್ಲಿ ಏಶ್ಯನ್ ದಾಖಲೆಯೊಂದಿಗೆ ಚಿನ್ನದ ಪದಕವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತವು ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ತನ್ನ ಶ್ರೇಷ್ಠ ಪದಕ ಗಳಿಕೆ ಸಾಧನೆಯನ್ನು ಸರಿಗಟ್ಟಿತು.

ಭಾರತ ಇದೀಗ 5 ಚಿನ್ನ ಸಹಿತ ಒಟ್ಟು 11 ಪದಕಗಳನ್ನು ಜಯಿಸಿದೆ. ಪ್ಯಾರಿಸ್ ನಲ್ಲಿ 2023ರ ಆವೃತ್ತಿಯಲ್ಲಿನ ತನ್ನ ಹಿಂದಿನ ಶ್ರೇಷ್ಠ ಸಾಧನೆ(3 ಚಿನ್ನ,4 ಬೆಳ್ಳಿ, 3 ಕಂಚು ಸಹಿತ 10 ಪದಕ)ಯನ್ನು ಉತ್ತಮಪಡಿಸಿಕೊಂಡಿತು.

ಬುಧವಾರ ನಡೆದ ಸ್ಪರ್ಧೆಯಲ್ಲಿ ಸಚಿನ್ ಅವರು ಶಾಟ್ಪುಟ್ ಅನ್ನು 16.30 ಮೀ.ದೂರಕ್ಕೆ ಎಸೆದರು. ಇದರೊಂದಿಗೆ ಕಳೆದ ವರ್ಷ ಪ್ಯಾರಿಸ್ ನಲ್ಲಿ ನಡೆದಿದ್ದ ವರ್ಲ್ಡ್ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ನಿರ್ಮಿಸಿರುವ ತನ್ನದೇ ಏಶ್ಯನ್ ದಾಖಲೆಯನ್ನು (16.21 ಮೀ.)ಉತ್ತಮಪಡಿಸಿಕೊಂಡರು.

ಭಾರತವು ಮಂಗಳವಾರ ಒಂದೇ ದಿನ ಐದು ಪದಕಗಳನ್ನು ಜಯಿಸಿದ್ದು 4 ಚಿನ್ನ,4 ಬೆಳ್ಳಿ ಹಾಗೂ 2 ಕಂಚು ಸಹಿತ ಒಟ್ಟು 10 ಪದಕಗಳನ್ನು ಬಾಚಿಕೊಂಡಿದೆ. ಸದ್ಯ ಚೀನಾ ಪದಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಬ್ರೆಝಿಲ್ ನಂತರದ ಸ್ಥಾನದಲ್ಲಿದೆ.

ಹಾಂಗ್ಝೌ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತ ಶಾಟ್ಪುಟ್ ಎಸೆತಗಾರ ಸಚಿನ್ ಮೊದಲ ಸ್ಥಾನ ಪಡೆಯುವ ವಿಶ್ವಾಸ ನನಗಿತ್ತು ಎಂದು ಪಿಟಿಐಗೆ ತಿಳಿಸಿದ್ದಾರೆ.

ನಾನು ಇಲ್ಲಿ ಚಿನ್ನದ ಪದಕ ನಿರೀಕ್ಷಿಸಿದ್ದೆ. ಚಿನ್ನ ಗೆದ್ದಿರುವುದಕ್ಕೆ ಸಂತೋಷಗೊಂಡಿರುವೆ. ನಾನು ಪ್ಯಾರಿಸ್ ಒಲಿಂಪಿಕ್ಸ್ ಗೂ ಅರ್ಹತೆ ಪಡೆದಿದ್ದು, ಅಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸ ಇದೆ ಎಂದು ಸಚಿನ್ ಹೇಳಿದ್ದಾರೆ.

ಇನ್ನೂ ಮೂರು ದಿನಗಳ ಸ್ಪರ್ಧೆ ಬಾಕಿ ಇದ್ದು ಭಾರತವು ಚಿನ್ನ ಸಹಿತ ಇನ್ನಷ್ಟು ಪದಕ ಗೆಲ್ಲುವ ಸಾಧ್ಯತೆಯಿದೆ. ನಾನು ಇನ್ನೂ ಎರಡು ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದೇನೆ. ಒಟ್ಟು 17 ಪದಕಗಳನ್ನು ಗೆಲ್ಲುವ ವಿಶ್ವಾಸ ನನಗಿದೆ ಎಂದು ಮುಖ್ಯ ಕೋಚ್ ಸತ್ಯನಾರಾಯಣ ಆಶಾವಾದ ವ್ಯಕ್ತಪಡಿಸಿದರು.

ಮಂಗಳವಾರ ಹಾಲಿ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಸುಮಿತ್ ಅಂಟಿಲ್ ಎಫ್64 ಜಾವೆಲಿನ್ ಎಸೆತದಲ್ಲಿ ವಿಶ್ವ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ. ತಂಗವೇಲು ಮರಿಯಪ್ಪನ್ ಹಾಗೂ ಎಕ್ತಾ ಭ್ಯಾನ್ ತಮ್ಮ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಜಯಿಸಿದ್ದು, ಭಾರತವು ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News