ಕೋಲಾರ: ಮಾರಕಾಸ್ತ್ರದಿಂದ ಹೊಡೆದು ಪತ್ನಿಯ ಭೀಕರ ಹತ್ಯೆ, ಮಾವನ ಸ್ಥಿತಿ ಗಂಭೀರ
ಕೋಲಾರ : ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಪತಿಯೊಬ್ಬ ಮಾರಕಾಸ್ತ್ರದಿಂದ ಪತ್ನಿಯನ್ನು ಹತ್ಯೆಗೈದ ಘಟನೆ ಬುಧವಾರ ಸಂಜೆ ವರದಿಯಾಗಿದೆ.
ರಾಧಾ (32) ಕೊಲೆಯಾದವರು. ಶ್ರೀನಿವಾಸಪುರದ ಮಾಂಸದ ವ್ಯಾಪಾರಿ ನಾಗೇಶ್ (40) ಕೊಲೆ ಆರೋಪಿ ಎಂದು ತಿಳಿದು ಬಂದಿದೆ.
ನಾಗೇಶ್ ತನ್ನ ಮೊದಲ ಪತ್ನಿ ರಾಧಾಗೆ ವಿಚ್ಛೇದನ ನೀಡಿದ್ದ, ನ್ಯಾಯಾಲಯದ ಆದೇಶದಂತೆ ಜೀವನಾಂಶ ನೀಡುತ್ತಿದ್ದ. ಎರಡನೇ ಪತ್ನಿಯೊಂದಿಗೆ ಶ್ರೀನಿವಾಸಪುರದಲ್ಲಿ ವಾಸವಾಗಿದ್ದ ಎಂದು ಹೇಳಲಾಗಿದೆ.
ಮಂಗಳವಾರ ನಂಬಿಹಳ್ಳಿಗೆ ಬಂದ ನಾಗೇಶ್, ಅಂಗಡಿಯಲ್ಲಿದ್ದ ವಿಚ್ಛೇದಿತ ಪತ್ನಿ ರಾಧಾ ಮತ್ತು ಮಾವನ ತಲೆಗೆ ಏಕಾಏಕಿ ಮಾರಕಾಸ್ತ್ರದಿಂದ ಹೊಡೆದಿದ್ದಾನೆ. ರಾಧಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆನ್ನಲಾಗಿದೆ.
ಗಂಭೀರ ಗಾಯಗೊಂಡಿದ್ದ ಮುನಿಯಪ್ಪ ಹಾಗೂ ಕೃತ್ಯ ತಡೆಯಲು ಬಂದ ರಾಧಾ ಅಣ್ಣನ ಪತ್ನಿ, ಅಣ್ಣನ ಮಗನನ್ನು ಶ್ರೀನಿವಾಸಪುರದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗ್ರಾಮದಲ್ಲಿ ನೂರಾರು ಜನ ಸೇರಿದ್ದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಸೃಳಕ್ಕೆ ಧಾವಿಸಿದ ಪೊಲೀಸರು ಮನೆಯಲ್ಲಿ ಅವಿತು ಕುಳಿತಿದ್ದ ಆರೋಪಿಗೆ ಶರಣಾಗಲು ಸೂಚಿಸಿದರು. ಆದರೆ, ಆರೋಪಿ ನಾಗೇಶ್ ಪೊಲೀಸರ ಮೇಲೆ ಮಾರಕಾಶ್ತ್ರಗಳಿಂದ ದಾಳಿ ಮಾಡಲು ಯತ್ನಿಸಿದಾಗ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದರು. ಕೆಳಗೆ ಬಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.
ಪ್ರಕರಣದ ಕುರಿತು ತಿಳಿಯುತ್ತಿದ್ದಂತೆ, ಕೇಂದ್ರ ವಲಯ ಐಜಿಪಿ , ಡಿವೈಎಸ್ ಪಿ ನಂದಕುಮಾರ್ ಭೇಟಿ ನೀಡಿದ್ದಾರೆ. ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.