‘ಕ್ವಿನ್ ಸಿಟಿ’ ರಾಷ್ಟ್ರಮಟ್ಟಕ್ಕೆ ಗೇಮ್‍ಚೇಂಜರ್ ಆಗಲಿದೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ‘ಕ್ವಿನ್ ಸಿಟಿ’ ಯೋಜನೆಯು ಕರ್ನಾಟಕ ಹಾಗೂ ರಾಷ್ಟ್ರ ಮಟ್ಟಕ್ಕೆ ಗೇಮ್ ಚೇಂಜರ್ ಆಗಲಿದೆ. ಕರ್ನಾಟಕ ಮತ್ತು ಭಾರತದ ಪಾಲಿಗೆ ಹೊಸ ಭಾಷ್ಯ ಬರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ‘ಕ್ವಿನ್ ಸಿಟಿ’ (ಜ್ಞಾನ, ಆರೋಗ್ಯ, ನಾವೀನ್ಯತೆ ಹಾಗೂ ಸಂಶೋಧನಾ ನಗರ) ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸುಸ್ಥಿರ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಶಕ್ತಿಯನ್ನು ಪ್ರದರ್ಶಿಸುವುದರ ಜೊತೆಗೆ ‘ಕ್ವಿನ್ ಸಿಟಿ’ ಯೋಜನೆ ಇತರ ರಾಜ್ಯಗಳಿಗೂ ಅನುಸರಣಾ ಮಾದರಿಯಾಗಲಿದೆ ಎಂದರು.
‘ಕ್ವಿನ್ ಸಿಟಿ’ ಯೋಜನೆಯು ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುವುದಲ್ಲದೇ ಅಂತಾರಾಷ್ಟ್ರೀಯ ಸಹಭಾಗಿತ್ವವನ್ನು ಪೋಷಿಸುತ್ತದೆ. ಹಾಗೂ ಕರ್ನಾಟಕವನ್ನು ವ್ಯವಹಾರಗಳಿಗೆ ಮತ್ತು ಜಗತ್ತಿನಾದ್ಯಂತ ನಾವೀನ್ಯತೆ ತರುವವರು ಆಯ್ಕೆ ಮಾಡುವ ಗಮ್ಯ ತಾಣವಾಗಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಹಾಗೂ ಭಾರತದ ಭವಿಷ್ಯವನ್ನು ರೂಪಿಸುವ ‘ಕ್ವಿನ್ ಸಿಟಿ’ ಎಂಬ ದೂರದೃಷ್ಟಿಯ ಯೋಜನೆಯನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ. ವೈವಿಧ್ಯತೆಯಿಂದ ಕೂಡಿರುವ ರಾಜ್ಯದ ಮುಖ್ಯಮಂತ್ರಿಯಾಗಿ, ‘ಕ್ವಿನ್ ಸಿಟಿ’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ಅಭಿವೃದ್ಧಿಯ ಪಥದಲ್ಲಿ ಸಾಗಲು ಹೆಮ್ಮೆಯೆನಿಸಿದೆ ಎಂದು ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದರು.
1909ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ, 1940ಯಲ್ಲಿ ಎಚ್‍ಎಎಲ್ ಹಾಗೂ 1970ರಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಸ್ಥಾಪನೆಯ ಮೂಲಕ, 20ನೇ ಶತಮಾನದಲ್ಲಿಯೇ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. 1980ರಲ್ಲಿ ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿಯಾಗಿ ಪರಿವರ್ತಿಸುವ ಮೂಲಕ ಕರ್ನಾಟಕ ಐಟಿ ಕ್ರಾಂತಿಯತ್ತ ದೊಡ್ಡ ಹೆಜ್ಜೆಯನ್ನು ಇರಿಸಿತ್ತು ಎಂದು ಸಿದ್ದರಾಮಯ್ಯ ತಿಳಿಸಿದರು.
ಇಂದು ಕರ್ನಾಟಕ ರಾಜ್ಯ, ಭಾರತದ 45 ಯೂನಿಕಾರ್ನ್ಸ್ ಗೆ ತವರೂರಾಗಿದ್ದು, ಭಾರತದ ಒಟ್ಟು ಯೂನಿಕಾರ್ನ್ ಮೌಲ್ಯದಲ್ಲಿ ಶೇ. 50ರಷ್ಟು ಪಾಲನ್ನು ಹೊಂದಿದೆ. ಇಂದು ಬೆಂಗಳೂರು, 17ಸಾವಿರಕ್ಕೂ ಹೆಚ್ಚು ಏಂಜಲ್ ಹೂಡಿಕೆದಾರರ ಹಾಗೂ 1,500 ವಿಸಿ ಹೂಡಿಕೆಗಳ ತವರೂರಾಗಿದೆ. ಈ ಸಾಧನೆಯನ್ನು ನಾವಿನ್ಯತೆಯನ್ನು ಪ್ರೊತ್ಸಾಹಿಸುವ ಹಾಗೂ ಪ್ರತಿಭೆಯನ್ನು ಪೋಷಿಸುವ ಹಾಗೂ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಮೂಲಕ ವಾಣಿಜ್ಯೋದ್ಯಮಕ್ಕೆ ಸಹಕರಿಸುವ ನಮ್ಮ ಸರಕಾರದ ಬದ್ಧತೆಯಿಂದ ಸಾಧ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಹಯೋಗ, ನಾವೀನ್ಯತೆ ಹಾಗೂ ಶ್ರೇಷ್ಠತೆಯನ್ನು ಸಾಧಿಸುವ ದಿಸೆಯಲ್ಲಿ ವಿಶ್ವಮಟ್ಟದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯೊಂದಿಗೆ ಕ್ವಿನ್ ಸಿಟಿಗೆ ಚಾಲನೆ ನೀಡಲಾಗಿದೆ. ಅತ್ಯಾಧುನಿಕ ಹಾಗೂ ವಿಶೇಷತೆಯುಳ್ಳ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಲು ಹಾಗೂ ಜಾಗತಿಕ ಸವಾಲುಗಳಿಗೆ ಪರಿಹಾರವನ್ನು ಕಂಡುಹಿಡಿಯುವ ಉದ್ದೇಶದಿಂದ ಪ್ರಮುಖ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು ಹಾಗೂ ಕೈಗಾರಿಕಾ ಭಾಗೀದಾರರನ್ನು ಒಗ್ಗೂಡಿಸಲಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಕರ್ನಾಟಕವನ್ನು ಸಾರ್ವಜನಿಕ-ಖಾಸಗಿ ಬಂಡವಾಳದ ಹಬ್ ಆಗಿ ಅಭಿವೃದ್ಧಿಗೊಳ್ಳಲು ಹಾಗೂ ರಾಜ್ಯದ ಜಿಡಿಪಿಗೆ ಸುಸ್ಥಿರ ಕೊಡುಗೆ ನೀಡಲು ಕ್ವಿನ್ ಸಿಟಿ ಸಹಕರಿಸುತ್ತದೆ. ಪ್ರಗತಿ, ಅತ್ಯಾಧುನಿಕ ಸಂಶೋಧನೆ, ಪ್ರತಿಭಾ ಪೋಷಣೆಗೆ ಹಾಗೂ ಆರೋಗ್ಯ, ಬಯೋ ಟೆಕ್ನಾಲಜಿ ವಲಯಗಳಲ್ಲಿ ಅವಕಾಶಗಳನ್ನು ಸೃಜಿಸುವ ನಿಟ್ಟಿನಲ್ಲಿ ಕ್ವಿನ್‍ಸಿಟಿ ಕ್ರಿಯಾತ್ಮಕ ಇಂಜಿನ್‍ನಂತೆ ವರ್ತಿಸಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಜ್ಞಾನ ಮತ್ತು ಸಂಶೋಧನೆಯನ್ನು ಸಂಯೋಜಿಸುವ ಸಹಯೋಗದ ಪರಿಸರವನ್ನು ಪೋಷಿಸುವುದರ ಮೂಲಕ ಕೆ.ಎಚ್.ಐ.ಆರ್ ಸಿಟಿ ನಾವೀನ್ಯತೆ ಮತ್ತು ಆರೋಗ್ಯ ವಲಯಗಳಲ್ಲಿ ಕರ್ನಾಟಕದ ಜಾಗತಿಕ ಸ್ಥಾನವನ್ನು ಎತ್ತರಕ್ಕೇರಿಸುವ ಗುರಿಯನ್ನು ಹೊಂದಿದೆ. ತನ್ಮೂಲಕ ರಾಜ್ಯವನ್ನು ಸುಸ್ಥಿರ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಮಾದರಿಯನ್ನಾಗಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಕ್ವಿನ್ ಸಿಟಿಯು ಭಾರಿ ಪರಿವರ್ತನೆಗೆ ಕಾರಣವಾಗುವ ಉಪಕ್ರಮವಾಗಿದ್ದು, ಇದು ದೃಢವಾದ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಪೋಷಿಸುವ ಕರ್ನಾಟಕದ ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ನಗರದೊಂದಿಗೆ ನಾವು ಕೈಗಾರಿಕಾ ಬೆಳವಣಿಗೆ ಮತ್ತು ಅಭಿವೃದ್ಧಿಗೆ ವೇದಿಕೆಯನ್ನು ಹೊಂದಿಸುತ್ತಿದ್ದೇವೆ. ಈ ಯೋಜನೆಯು ಗಮನಾರ್ಹವಾದ ದೇಶೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆಯನ್ನು ಆಕರ್ಷಿಸುವುದಲ್ಲದೆ, ವಿಶಾಲವಾದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ಆರ್ಥಿಕ ಸಮೃದ್ಧಿಗೆ ಚಾಲನೆ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಝಮೀರ್ ಅಹ್ಮದ್, ಚಲುವರಾಯಸ್ವಾಮಿ, ಡಾ.ಸುಧಾಕರ್, ಲಕ್ಷ್ಮಿ ಹೆಬ್ಬಾಳ್ಕರ್, ಕೆ.ಎನ್.ರಾಜಣ್ಣ, ಶರಣಬಸಪ್ಪ ದರ್ಶನಾಪುರ, ಮಂಕಾಳ ವೈದ್ಯ, ಭೋಸರಾಜು, ಶಿವಾನಂದ ಪಾಟೀಲ, ಮಧು ಬಂಗಾರಪ್ಪ, ರಹೀಂ ಖಾನ್ ಮತ್ತು ಆರ್.ಬಿ.ತಿಮ್ಮಾಪುರ, ಶಾಸಕ ಆರ್.ವಿ. ದೇಶಪಾಂಡೆ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಉದ್ಯಮಿಗಳಾದ ಪ್ರಶಾಂತ್ ಪ್ರಕಾಶ್, ಗೀತಾಂಜಲಿ ಕಿರ್ಲೋಸ್ಕರ್, ರಂಗೇಶ್ ರಾಘವನ್, ವೈದ್ಯ ಡಾ.ವಿವೇಕ ಜವಳಿ, ಕೆಐಎಡಿಬಿ ಸಿಇಒ ಡಾ.ಮಹೇಶ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು.
ಎಲ್ಲಿ ತಲೆ ಎತ್ತಲಿದೆ ‘ಕ್ವಿನ್ ಸಿಟಿ’: ಡಾಬಸ್‍ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ ಸ್ಯಾಟಲೈಟ್ ಟೌನ್‍ರಿಂಗ್ ರಸ್ತೆಯ ಆಸುಪಾಸಿನಲ್ಲಿ ‘ಕ್ವಿನ್ ಸಿಟಿ’ ತಲೆ ಎತ್ತಲಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಕೇವಲ 45 ನಿಮಿಷಗಳ ಪ್ರಯಾಣ, ನಗರ ಕೇಂದ್ರದಿಂದ 50 ಕಿ.ಮೀ. ಮತ್ತು ಬೆಂಗಳೂರು-ಪುಣೆ ಗ್ರೀನ್‍ಫೀಲ್ಡ್ ಎಕ್ಸ್ ಪ್ರೆಸ್‍ವೇಯಿಂದ ಐದು ಕಿ.ಮೀ. ದೂರದಲ್ಲಿದೆ. ಇದು ಬೆಂಗಳೂರು-ಹುಬ್ಬಳ್ಳಿ-ಮುಂಬೈ ಎಕ್ಸ್ ಪ್ರೆಸ್ ರೈಲು ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿ-44 ಮತ್ತು 648 ರ ಸಮೀಪದ ಮೂಲಕ ತಡೆರಹಿತ ಸಂಪರ್ಕದೊಂದಿಗೆ ದಟ್ಟಣೆಯನ್ನು ಕಡಿಮೆ ಮಾಡುವ, ಅನುಕೂಲತೆಯನ್ನು ಹೆಚ್ಚಿಸುವ ಅಂತರ-ಸಾರಿಗೆ ವ್ಯವಸ್ಥೆಗಳನ್ನು ಹೊಂದಿರುತ್ತದೆ.