ಮುಂದಿನ ಎಂಟು ತಿಂಗಳಲ್ಲಿ 1202 ಸೇವೆಗಳು ʼಸಕಾಲ’ ದಲ್ಲಿ ಲಭ್ಯ: ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ‘ಸಕಾಲ’ವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲ 1202 ಸೇವೆಗಳನ್ನು ಮುಂದಿನ ಎಂಟು ತಿಂಗಳಲ್ಲಿ ಜನಸಾಮಾನ್ಯರಿಗೆ ಆನ್‍ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ಸೋಮವಾರ ವಿಕಾಸಸೌಧದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳ ಜೊತೆ ಸಕಾಲ ಸಭೆ ನಡೆಸಿ ಮಾತನಾಡಿದ ಅವರು, ಸಕಾಲ ಯೋಜನೆಯ ಅಡಿ 101 ಇಲಾಖೆಯ 1082 ಸೇವೆಗಳನ್ನು ಈಗಾಗಲೆ ಜನರಿಗೆ ಒದಗಿಸಲಾಗುತ್ತಿದೆ. ಇದೀಗ ಹೊಸ 120 ಹೊಸ ಸೇವೆಗಳನ್ನು ಸೇರಿಸಲಾಗಿದೆ ಎಂದರು.
ಆದರೆ, ಹೊಸ ಸೇವೆ ಸೇರಿದಂತೆ ಕೆಲವು ಸೇವೆಗಳು ಇನ್ನೂ ಪೇಪರ್ ಅಪ್ಲಿಕೇಶನ್ ಮೋಡ್ ನಲ್ಲಿದ್ದು, ಮುಂದಿನ ಎಂಟು ತಿಂಗಳೊಳಗಾಗಿ ಎಲ್ಲ ಸೇವೆಗಳನ್ನೂ ಡಿಜಿಟಲೀಕರಿಸಬೇಕು ಎಂದು ಅಧಿಕಾರಿಗಳಿಗೆ ಅವರು ಗಡುವು ನೀಡಿದರು.
1202 ಸಕಾಲ ಸೇವೆಗಳ ಪೈಕಿ 922 ನಾಗರಿಕ ಹಾಗೂ 280 ಸಿಬ್ಬಂದಿ ಸೇವೆಗಳನ್ನು ನೀಡಲಾಗುತ್ತಿದೆ. ಆದರೆ, ಈ ಪೈಕಿ 802 ಸೇವೆಗಳನ್ನು ಮಾತ್ರ ಸೇವಾಸಿಂಧು ಆನ್‍ಲೈನ್ ನಲ್ಲಿ ಒದಗಿಸಲಾಗುತ್ತಿದೆ. ಉಳಿದಂತೆ 120 ಸೇವೆಗಳನ್ನು ಆನ್‍ಲೈನ್ ಮೂಲಕ ಒದಗಿಸಲಾಗುತ್ತಿಲ್ಲ ಎಂದು ಅವರು ತಿಳಿಸಿದರು.
ನಿಗದಿತ ಸೇವೆಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನಸಾಮಾನ್ಯರಿಗೆ ಅವಕಾಶ ಇದೆ. ಆದರೆ, ಆನ್‍ಲೈನ್ ಮೂಲಕ ಸೇವೆ ಲಭ್ಯವಾಗುತ್ತಿಲ್ಲ, ಬದಲಾಗಿ ಪೇಪರ್ ಅಪ್ಲಿಕೇಶನ್ ಮೋಡ್ ನಲ್ಲಿ ಸೇವೆ ಲಭ್ಯವಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಲಭ್ಯವಾಗುವ ಸೇವೆಯ ದಾಖಲಾತಿ ಆಗುತ್ತಿಲ್ಲ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಹೀಗಾಗಿ ಅರ್ಜಿಯಿಂದ ಸೇವೆಯವರೆಗೆ ಎಲ್ಲವೂ ಡಿಜಿಟಲೀಕಣಗೊಳಿಸಬೇಕು. ಎಲ್ಲವೂ ಆನ್‍ಲೈನ್ ನಲ್ಲಿ ದಾಖಲಾಗಬೇಕು. ಅಲ್ಲದೆ, ಏಕ ಗವಾಕ್ಷಿ ಸೇವಾ ಸಿಂಧು ಪೋರ್ಟಲ್ ನೊಂದಿಗೆ ಸಂಯೋಜಿಸಿ ಸೇವಾ ಸಿಂಧು ಪೋರ್ಟಲ್ ಮೂಲಕ ಲಭ್ಯವಾಗುವಂತೆ ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕಂದಾಯ ಆಯುಕ್ತ ಸುನೀಲ್ ಕುಮಾರ್, ಸಕಾಲ ನಿರ್ದೇಶಕ ಉಜ್ವಲ್ ಕುಮಾರ್ ಘೋಷ್ ಹಾಗೂ ಸಕಾಲ ಉಪ ನಿರ್ದೇಶಕಿ ಪಲ್ಲವಿ ಉಪಸ್ಥಿತರಿದ್ದರು.