ರಾಜ್ಯದಲ್ಲಿ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ರಿಂದ 1,400 ಕೋಟಿ ರೂ.ಹೂಡಿಕೆ‌ : ಎಂ.ಬಿ.ಪಾಟೀಲ್

Update: 2024-06-18 14:00 GMT

Photo : x/@MBPatil

ಬೆಂಗಳೂರು : ಚಾಮರಾಜನಗರ ಜಿಲ್ಲೆಯ ಬದನಕುಪ್ಪೆಯಲ್ಲಿ ಶ್ರೀಲಂಕಾದ ಕ್ರಿಕೆಟ್ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ತಂಪು ಪಾನೀಯ ಮತ್ತು ಸಿಹಿತಿಂಡಿಗಳ ಉದ್ಯಮ ಆರಂಭಿಸುತ್ತಿದ್ದು, ಹಂತ-ಹಂತವಾಗಿ ಒಟ್ಟು 1,400ಕೋಟಿ ರೂ.ಹೂಡಿಕೆ ಮಾಡಲಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ತಮ್ಮನ್ನು ಭೇಟಿಯಾದ ಮುತ್ತಯ್ಯ ಅವರೊಂದಿಗೆ ಈ ಸಂಬಂಧ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಬದನಕುಪ್ಪೆಯಲ್ಲಿ ಮುರಳೀಧರನ್ ಅವರು ‘ಮುತ್ತಯ್ಯ ಬ್ರಿವರೇಜಸ್ ಮತ್ತು ಕನ್ಫೆಕ್ಷನರೀಸ್' ಎನ್ನುವ ಬ್ರ್ಯಾಂಡ್ ನಲ್ಲಿ ತಮ್ಮ ಉದ್ದಿಮೆ ಆರಂಭಿಸುತ್ತಿದ್ದು, ಆರಂಭದಲ್ಲಿ 230ಕೋಟಿ ರೂ.ಹೂಡಿಕೆಗೆ ಯೋಜನೆ ರೂಪಿಸಲಾಗಿತ್ತು. ನಂತರ ಅದು ಈಗ ಸಾವಿರ ಕೋಟಿ ರೂ. ಮುಟ್ಟುತ್ತಿದೆ. ಮುಂದಿನ ದಿನಗಳಲ್ಲಿ 1,400ಕೋಟಿ ರೂ. ಆಗಲಿದೆ ಎಂದು ಮುತ್ತಯ್ಯ ತಮಗೆ ತಿಳಿಸಿದ್ದಾರೆ ಎಂದು ವಿವರಿಸಿದರು.

ಇದಕ್ಕಾಗಿ ಅವರಿಗೆ ಈಗಾಗಲೇ 46 ಎಕರೆ ಭೂಮಿ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಸಣ್ಣಪುಟ್ಟ ತೊಡಕುಗಳಿದ್ದವು. ಅವುಗಳನ್ನು ಕೂಡಲೇ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬದನಕುಪ್ಪೆಯಲ್ಲಿ ಮುಂಬರುವ ಜನವರಿಯಲ್ಲಿ ಉತ್ಪಾದನಾ ಚಟುವಟಿಕೆ ಆರಂಭವಾಗಲಿದೆ ಎಂದು ಅವರು ನುಡಿದರು.

ಮುಂಬರುವ ದಿನಗಳಲ್ಲಿ ಮುತ್ತಯ್ಯ ಧಾರವಾಡದಲ್ಲಿ ತಮ್ಮ ಉದ್ಯಮದ ಒಂದು ಘಟಕ ಸ್ಥಾಪಿಸಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿ ಸಿಇಒ ಡಾ.ಮಹೇಶ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಈ. ಸಂದರ್ಭದಲ್ಲಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News