ಕಲಬುರಗಿ: ಗುಂಪು ಘರ್ಷಣೆ; ಜೇವರ್ಗಿಯಲ್ಲಿ ಸೆಕ್ಷನ್ 144 ಜಾರಿ

Update: 2023-11-27 14:59 GMT

ಕಲಬುರಗಿ: ಗಣೇಶ ಕಟ್ಟೆ ನವೀಕರಣ ವಿಚಾರವಾಗಿ ಎರಡು ತಂಡಗಳ ನಡುವೆ ಘರ್ಷಣೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜೇವರ್ಗಿ ತಾಲೂಕಿನ ಅಂಕಲಗಿಯಲ್ಲಿ ಮುನ್ನೆಚ್ಚರಿಕೆಯಾಗಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಗ್ರಾಮದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಸ್ಪಿ ಅಡ್ಡೂರು ಶ್ರೀನಿವಾಸಲು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ಗಣೇಶ ಪ್ರತಿಷ್ಠಾಪನೆ ಕಟ್ಟೆ ನವೀಕರಣಕ್ಕೆ ಯುವಕರ ಗುಂಪೊಂದು ಮುಂದಾಗಿತ್ತು. ಆದರೆ, ಗಣೇಶ ಕಟ್ಟೆಗೆ ಹೊಂದಿಕೊಂಡಂತೆ ಮಸೀದಿ ಇರುವ ಕಾರಣ ಸಂಘರ್ಷ ಉಂಟಾಗಿದೆ ಎನ್ನಲಾಗಿದೆ. ಎರಡು ಗುಂಪಿನ ಜನರು ಕಲ್ಲು ತೂರಾಟ ಮತ್ತು ಬಡಿಗೆಗಳಿಂದ ಹೊಡೆದಾಡಿಕೊಂಡಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಎಸ್ಪಿ ಅಡ್ಡೂರು ಶ್ರೀನಿವಾಸಲು ಪ್ರತಿಕ್ರಿಯಿಸಿ, ನೆಲೋಗಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜಾಗ ಖಾಲಿಮಾಡಿಸುವ ವಿಚಾರವಾಗಿ ವ್ಯಕ್ತಿಯೊಬ್ಬ ವಾಟ್ಸ್ಆ್ಯಪ್ ನಲ್ಲಿ ಮಾಹಿತಿ ಹಾಕಿದ್ದ. ಅಂಗಡಿ ಖಾಲಿ ಮಾಡಿ ಎಂದು ಬೆದರಿಕೆ ಹಾಕುತ್ತಿರುವುದಾಗಿ ಗ್ರೂಪ್ ನಲ್ಲಿ ಮೆಸೇಜ್ ಹಾಕಿದ್ದ. ಈ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ಶುರುವಾಗಿದೆ. ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

"ಈ ಹಿಂದೆಯು ಜಾಗದ ವಿವಾದ ಉಂಟಾಗಿತ್ತು. ಎರಡು ಗುಂಪಿನೊಂದಿಗೆ ತಹಶೀಲ್ದಾರ್ ಮತ್ತು ಪಿಡಿಒ ಸೇರಿ ಸಭೆ ನಡೆಸಿ ಆಸ್ತಿಯು ಗ್ರಾಮ ಪಂಚಾಯತ್ ಗೆ ಸೇರಿದ್ದಾಗಿದೆ ಎಂದು ವಿವಾದ ಬಗೆ ಹರಿಸಿದರು. ಆದರೆ ವಾಟ್ಸ್ಆ್ಯಪ್ ನಿಂದ ಈ ವಿವಾದ ಉಂಟಾಗಿದೆ. ಸದ್ಯ ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು"

ಅಡ್ಡೂರು ಶ್ರೀನಿವಾಸಲು, ಕಲಬುರಗಿ ಎಸ್.ಪಿ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News