ದೇಶದ 70 ಸ್ಟಾರ್ಟಪ್ ಗಳಿಂದ 17 ಸಾವಿರ ಉದ್ಯೋಗ ಕಡಿತ
ಹೊಸದಿಲ್ಲಿ: ಹಣಕಾಸು ನೆರವಿನ ಕೊರತೆಯಿಂದಾಗಿ ದೇಶದಲ್ಲಿ ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಸುಮಾರು 70 ಸ್ಟಾರ್ಟಪ್ ಕಂಪನಿಳು 17 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ ಎಂದು ಸಿಐಇಎಲ್ ಎಚ್‍ಆರ್ ಸಂಸ್ಥೆಯ ನೇಮಕಾತಿ ಮತ್ತು ನಿಯೋಜನೆ ವಿಭಾಗದ ಮೂಲಗಳು ಹೇಳಿವೆ.
ಸ್ಟಾರ್ಟಪ್ ಗಳು ಸಾಮಾನ್ಯವಾಗಿ ಬೆಳವಣಿಗೆಗೆ ಬಾಹ್ಯ ಹೂಡಿಕೆಯನ್ನು ಅವಲಂಬಿಸಿರುತ್ತವೆ. ಆದರೆ ಹೂಡಿಕೆದಾರರ ನೆರವಿನ ಪ್ರಮಾಣ ಗಣನೀಯವಾಗಿ ಕುಸಿದಿರುವುದರಿಂದ ವೆಚ್ಚ ಕಡಿತಗೊಳಿಸಿ ಹಣ ಉಳಿಸುವುದು ಅನಿವಾರ್ಯವಾಗಿದೆ. "ಹೊಸ ಹೂಡಿಕೆಯ ಅಭಾವದ ಕಾರಣದಿಂದ ನೆರವಿನ ಕೊರತೆ ಈ ಸ್ಟಾರ್ಟಪ್ ಕಂಪನಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ" ಎಂದು ಸಿಐಇಆರ್ ಎಚ್‍ಆರ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಆದಿತ್ಯ ಮಿಶ್ರಾ ಹೇಳಿದ್ದಾರೆ.
ಇ-ಕಾಮರ್ಸ್, ಫಿನ್‍ಟೆಕ್, ಎಜ್ಯುಟೆಕ್, ಲಾಜಿಸ್ಟಿಕ್ಸ್ ಟೆಕ್, ಹೆಲ್ತ್ ಟೆಕ್ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ಮೀಶೋ, ಅನಾಕಡೆಮಿ, ಸ್ವಿಗ್ಗಿ ಹಾಗೂ ಶೇರ್ ಚಾಟ್‍ನಂಥ ಯುನಿಕಾರ್ನ್ ಕಂಪನಿಗಳು ಕೂಡಾ ಉದ್ಯೋಗ ಕಡಿತಗೊಳಿಸಿವೆ. ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಬೈಜೂಸ್ ಕಳೆದ ಒಂದು ವರ್ಷದಲ್ಲಿ 1000 ಉದ್ಯೋಗಿಗಳನ್ನು ವಜಾ ಮಾಡಿದೆ.
ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ದೇಶದಲ್ಲಿ ಸ್ಟಾರ್ಟ್‍ಅಪ್ ನೆರವಿನ ಪ್ರಮಾಣ 18.3 ಶತಕೋಟಿ ಡಾಲರ್ ಆಗಿದ್ದರೆ, ಈ ಪ್ರಮಾಣ ಈಗ 3.8 ಶತಕೋಟಿ ಡಾಲರ್ ಗೆ ಇಳಿದಿದೆ ಎಂದು ಪಿಡಬ್ಲ್ಯುಸಿ ಅಂದಾಜಿಸಿದೆ.