18,221 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಸೂರಿಲ್ಲ!

Update: 2023-10-11 13:39 GMT

ಬೆಂಗಳೂರು, ಅ.11: ಮಗುವಿನ ಕಲಿಕಾರಂಭದ ಮೊದಲ ದೇಗುಲವೆಂದೇ ಕರೆಯಲ್ಪಡುವ ಅಂಗನವಾಡಿ ಕೇಂದ್ರದ ಕಲಿಕಾ ತಳಹದಿ ಹತ್ತು ಹಲವು ಸಮಸ್ಯೆಗಳಿಂದ ಕುಸಿಯುತ್ತಿದೆ. ರಾಜ್ಯದಲ್ಲಿ ಒಟ್ಟು 66,361 ಅಂಗನವಾಡಿ ಕೇಂದ್ರಗಳು ಕೆಲಸ ನಿರ್ವಹಿಸುತ್ತಿವೆ. ಆ ಪೈಕಿ 36,529 ಅಂಗನವಾಡಿ ಸ್ವಂತ ಕಟ್ಟಡಗಳನ್ನು ಹೊಂದಿದ್ದರೆ, ಇನ್ನುಳಿದ 18,221 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲದೆ ಗ್ರಾ.ಪಂ. ಇಲ್ಲವೇ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ಒದಗಿಸಲಾಗಿದೆ. ಇದರ ಪರಿಣಾಮ ಪ್ರತೀ ತಿಂಗಳು ಬಾಡಿಗೆ ಪಾವತಿಸಬೇಕಾದಂತಾಗಿದ್ದು, ಸರಕಾರದ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸಿದೆ.

ಅಂಗನವಾಡಿ ಕೇಂದ್ರಗಳಿಗೆ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಬೆಳಗಾವಿಯ ಮೆಣಸಿನಗಲ್ಲಿಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಮ್ಮ ಮಾಂಗಲ್ಯ ಸರ ಗಿರವಿ ಇಟ್ಟು ಬಾಡಿಗೆ ಕಟ್ಟಿದ್ದು, ಆ ಬಳಿಕ ಗಿರವಿ ಇಟ್ಟಿದ್ದ ಮಾಂಗಲ್ಯ ಸರವನ್ನು ಅಧಿಕಾರಿಗಳು ಹಣ ಪಾವತಿಸಿ ಬಿಡಿಸಿಕೊಟ್ಟಿದ್ದಾರೆ. ಬಿಜಾಪುರದ ದರಬಾರಗಲ್ಲಿಯ ಅಂಗನವಾಡಿಗೆ 22 ತಿಂಗಳಿಂದ ಹಣ ಬಿಡುಗಡೆಯಾಗಿಲ್ಲ. ಕಾರ್ಯಕರ್ತೆ ಈಗಲೂ ಸಾಲ ಮಾಡಿ ಬಾಡಿಗೆ ಕಟ್ಟುತ್ತಿದ್ದಾರೆ. ಇತ್ತ ತುಮಕೂರಿನ ಮಲ್ಲೂರಿನಲ್ಲಿ ಮಂಟಪವೊಂದನ್ನೇ ಅಂಗನ ವಾಡಿಗೆ ಪಡೆಯಲಾಗಿದ್ದು, ಇದುವರೆಗೂ ಯೋಜನಾಧಿಕಾರಿಗಳು ಯಾವುದೇ ಬಾಡಿಗೆಯನ್ನೂ ಪಾವತಿಸಿಲ್ಲ ಎನ್ನುವ ಆರೋಪವೂ ಕೇಳಿಬಂದಿದೆ.

ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಇಂತಹ ಹಲವಾರು ಉದಾಹರಣೆಗಳು ಸಿಗುತ್ತವೆ. ಅಂಗನವಾಡಿ ಕೇಂದ್ರವನ್ನು ಮುಚ್ಚುವ ಸ್ಥಿತಿ ಬರಬಾರದು ಎಂದು ಕಾರ್ಯಕರ್ತೆಯರೇ ಎಷ್ಟೋ ಕಡೆ ಬಾಡಿಗೆ ಹಣವನ್ನು ಹೊಂದಿಸುತ್ತಿದ್ದಾರೆ ಎನ್ನುತ್ತಾರೆ ರಾಜ್ಯ ಅಂಗನವಾಡಿ ಕಾರ್ಯಕತೆಯರ ಮಹಾಮಂಡಳಿ ಅಧ್ಯಕ್ಷ ಶಿವಶಂಕರ್.

ಬಾಲ ವಿಕಾಸ ಯೋಜನಾಧಿಕಾರಿಗಳಿಂದ 36 ಕೋಟಿ ರೂ. ದುರುಪಯೋಗ

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ 2022-23ನೇ ಸಾಲಿಗೆ ಕೇಂದ್ರ ಸರಕಾರ ಬಿಡುಗಡೆಗೊಳಿಸಿದ ಫ್ಲೆಕ್ಸಿ ಫಂಡ್ ಹಾಗೂ ರಾಜ್ಯದ ಪಾಲಿನ ಅನುದಾನ ಒಟ್ಟು 36,35,76,000 ರೂ.ನ್ನು ರಾಜ್ಯದ 204 ತಾಲೂಕುಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಸಮಗ್ರ ಬಾಲ ವಿಕಾಸ ಯೋಜನೆಗಳಿಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಜ್ಯದ ಎಲ್ಲಾ ಯೋಜನೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ ನೀಡಬೇಕಿರುವ ಹಣವನ್ನು ನೀಡದೇ ಬಾಲ ವಿಕಾಸ ಯೋಜನಾಧಿಕಾರಿಗಳು ಹಾಗೂ ಉಪ ನಿರ್ದೇಶಕರು ಸಂಪೂರ್ಣ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದರ ಕುರಿತಾಗಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದು, ಅವ್ಯವಹಾರದಲ್ಲಿರುವ ಎಲ್ಲ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಆಗಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ಅಧ್ಯಕ್ಷ ಜಿ.ಆರ್.ಶಿವಶಂಕರ್ ಆಗ್ರಹಿಸಿದ್ದಾರೆ.

ಯೋಜನೆಯಲ್ಲಿ ಅಕ್ರಮ ಮುಂಬಡ್ತಿ

ರಾಜ್ಯದಲ್ಲಿ 46 ಸಂರಕ್ಷಣಾಧಿಕಾರಿಗಳ ಹುದ್ದೆ ಪೈಕಿ 24 ವಕೀಲ ವೃತ್ತಿಯಲ್ಲಿರುವ ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಸದರಿ ಮಹಿಳೆಯರಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಹುದ್ದೆ ನೀಡಬಾರದೆಂದು ಹೈಕೋರ್ಟ್ ಆದೇಶಿಸಿದೆ. ಅದಾಗ್ಯೂ ಸಹ 2018-19ನೇ ಸಾಲಿನಲ್ಲಿ ವಾಮ ಮಾರ್ಗದಲ್ಲಿ 15 ಸಂರಕ್ಷಣಾಧಿಕಾರಿಗಳು ಶಿಶು ಅಭಿವೃದ್ಧಿ ಯೋಜನೆಯಲ್ಲಿ ಮುಂಬಡ್ತಿ ಪಡೆದಿದ್ದಾರೆ. ಈ ಅಧಿಕಾರಿಗಳು ಅನು‘ವವಿಲ್ಲದೆ ಕಾರ್ಯಕರ್ತೆಯರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದು, ಕೂಡಲೇ ವಜಾಗೊಳಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆಯರ ಮಂಡಳಿ ಒತ್ತಾಯಿಸಿದೆ.

ಕೆಲವು ಕಡೆಗಳಲ್ಲಿ ಬಾಡಿಗೆ ಪಾವತಿಸದ ಕಾರಣ ಜಾಗ ಖಾಲಿ ಮಾಡುವಂತೆ ಕಟ್ಟಡ ಮಾಲಕರು ಒಂದೆಡೆ ಒತ್ತಡ ಹೇರುತ್ತಿದ್ದರೆ, ಇನ್ನೊಂದೆಡೆ ಅನುದಾನ ಬಿಡುಗಡೆ ನಿರೀಕ್ಷೆಯಲ್ಲಿ ಇಲಾಖೆಯ ಅಧಿಕಾರಿಗಳು ದಿನ ದೂಡುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 9 ತಿಂಗಳಿನಿಂದ ಅನುದಾನ ಬಿಡುಗಡೆ ಆಗಿಲ್ಲ. ಇದರ ಪರಿಣಾಮ ವಿದ್ಯುತ್, ಇಂಟರ್‌ನೆಟ್ ಬಿಲ್ ಪಾವತಿಸಲು, ವಾಹನಗಳಿಗೆ ಇಂ‘ನ ಹಾಕಿಸಲು ಅಲ್ಲದೆ ಅಂಗನವಾಡಿ ಕೇಂದ್ರಗಳ ಕಟ್ಟಡಕ್ಕೆ ಬಾಡಿಗೆ ಕಟ್ಟಲು ಸಾಧ್ಯವಾಗಿಲ್ಲ ಎಂದು ಬೆಳಗಾವಿಯ ಅಂಗನವಾಡಿ ಕಾರ್ಯಕರ್ತೆಯರು ದೂರಿದರು.

ನಗರ ಪ್ರದೇಶಗಳ ಅಂಗನವಾಡಿಗೆ ತಿಂಗಳಿಗೆ 4 ಸಾವಿರ ರೂ. ಹಾಗೂ ಗ್ರಾಮೀಣ ಭಾಗದ ಅಂಗನವಾಡಿಗೆ 1 ಸಾವಿರ ರೂ. ಬಾಡಿಗೆ ಹಣ ನೀಡಲಾಗುತ್ತದೆ. ಕೆಲವೊಮ್ಮೆ ಈ ಮೊತ್ತವನ್ನೂ ಭರಿಸಲಾಗದ ಅಸಹಾಯಕ ಸ್ಥಿತಿಯೂ ನಿರ್ಮಾಣವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರ ಪ್ರದೇಶದಲ್ಲಿ ಒಂದು ಅಂಗನವಾಡಿ ಕೇಂದ್ರದ ತಿಂಗಳ ಸರಾಸರಿ ವಿದ್ಯುತ್ ಬಿಲ್ 210 ರೂ. ಮತ್ತು ಗ್ರಾಮೀಣ ಭಾಗದಲ್ಲಿ 150 ರೂ. ಬರುತ್ತದೆ. ವಿದ್ಯುತ್ ಬಿಲ್ ಪಾವತಿಸದ್ದಕ್ಕೆ ವಿದ್ಯುತ್ ಪೂರೈಕೆ ಕಡಿತಗೊಳಿಸಿದ ಪ್ರಕರಣಗಳು ನಡೆದಿವೆ ಎಂದು ಕಾರ್ಯಕರ್ತೆಯೊಬ್ಬರು ಹೇಳಿದ್ದಾರೆ.

ಕಾರ್ಯಕರ್ತೆಯರಿಗೆ ಅಭದ್ರತೆ: ಅಂಗನವಾಡಿ ಕೇಂದ್ರಗಳ ಕಟ್ಟಡದ ಕೊರತೆ ಒಂದೆಡೆಯಾದರೆ ಮಕ್ಕಳು, ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಣೆ, ಆರೋಗ್ಯ ತಪಾಸಣೆ, ಚುಚ್ಚುಮದ್ದು, ಮಹಿಳೆ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಶಿಕ್ಷಣ, ತರಬೇತಿಗಳನ್ನು ಕೈಗೊಂಡು ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮತ್ತೊಂದೆಡೆ ಕೆಲಸದ ಅಭದ್ರತೆಯೂ ಕಾಡುತ್ತಿದೆ. ಕೆಲ ಭ್ರಷ್ಟ ಅಧಿಕಾರಿಗಳು ಬೇರೆಯವರಿಂದ ಲಂಚ ಪಡೆದು ಯಾವುದೇ ನೋಟಿಸ್ ಆಗಲಿ, ವಿಚಾರಣೆಯನ್ನಾಗಲಿ ನಡೆಸದೆ ಏಕಾಏಕಿ ಕೆಲಸದಿಂದ ತೆಗೆಯುತ್ತಿದ್ದಾರೆ. ತೆರವು ಸ್ಥಳಗಳಿಗೆ ಲಂಚ ಕೊಟ್ಟವರನ್ನು ನೇಮಿಸಿಕೊಳ್ಳುತ್ತಾರೆ, ಈ ಮೋಸವನ್ನು ಸರಕಾರ ತಡೆಯಬೇಕು ಎಂದು ಕಾರ್ಯಕರ್ತೆ ಉಷಾ ಆಕ್ರೋಶ ಹೊರಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ಯೋಗೇಶ್ ಮಲ್ಲೂರು

contributor

Similar News