ಪಂಚಮಸಾಲಿ ಸಮುದಾಯಕ್ಕೆ 2 ‘ಎ’ ಮೀಸಲಾತಿ; ಜಯಮೃತ್ಯುಂಜಯ ಸ್ವಾಮಿ ನೇತೃತ್ವದ ನಿಯೋಗದ ಜೊತೆ ಸಿಎಂ ಚರ್ಚೆ

Update: 2023-12-12 12:57 GMT

ಬೆಳಗಾವಿ: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಪ್ರವರ್ಗ 2 ‘ಎ’ ಅಡಿಯಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಕೂಡಲಸಂಗಮದ ಜಯ ಬಸವ ಮೃತ್ಯುಂಜಯ ಸ್ವಾಮಿ ನೇತೃತ್ವದ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದರು.

ಮಂಗಳವಾರ ಸುವರ್ಣ ವಿಧಾನಸೌಧದಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮಿ ನೇತೃತ್ವದಲ್ಲಿ ಸಮುದಾಯದ ಶಾಸಕರು, ಸಚಿವರೊಂದಿಗೆ ಸಭೆ ನಡೆಸಿದ ಅವರು, ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆ ಕಾನೂನು ತಜ್ಞರು ಮತ್ತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಹಾಗೂ ಅಡ್ವೊಕೇಟ್ ಜನರಲ್ ಅವರ ಜತೆ ಸಭೆ ನಡೆಸಿ ಈ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ನಿಯೋಗಕ್ಕೆ ಭರವಸೆ ನೀಡಿದರು.

ನಾಳೆ ನಿಲುವು ಪ್ರಕಟ: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ್ದೇವೆ. ಮೂರು ವರ್ಷಗಳ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನೂತನ ಸರಕಾರ ಬಂದ ಮೇಲೆ ಮೊದಲ ಸುತ್ತಿನ ಮಾತುಕತೆ ಮಾಡಬೇಕು ಮತ್ತು ನಮ್ಮ ಹೋರಾಟಕ್ಕೆ ಸರಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿ ನಾಳೆ(ಡಿ.13) ಬೆಳಗಾವಿಯಲ್ಲಿ ಹೋರಾಟ ಸಭೆಯನ್ನು ಕರೆಯಲಾಗಿದೆ ಎಂದು ಜಯ ಬಸವ ಮೃತ್ಯುಂಜಯ ಸ್ವಾಮಿ ತಿಳಿಸಿದರು.

ನಮ್ಮ ಹೋರಾಟಕ್ಕೆ ಮಣಿದು ಸರಕಾರ ಇವತ್ತು ಸಭೆ ಮಾಡಿದೆ. ನಾಳೆ ಚನ್ನಮ್ಮ ಸರ್ಕಲ್‍ನಲ್ಲಿ ಆಯೋಜಿಸಿರುವ ಸಭೆಗೆ ನಮ್ಮ ಸಮುದಾಯದ ಎಲ್ಲ ಮುಖಂಡರು ಬರಬೇಕು. ಅಲ್ಲಿ ನಮ್ಮ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡಿ ಪ್ರಕಟಿಸುತ್ತೇವೆ. ಮುಖ್ಯಮಂತ್ರಿ ಜೊತೆ ನಡೆದ ಸಭೆಯ ವಿವರಗಳನ್ನು ಮಾಧ್ಯಮಗಳ ಎದುರು ನಾನು ಹೇಳಲು ಇಷ್ಟ ಪಡುವುದಿಲ್ಲ ಎಂದು ಅವರು ಹೇಳಿದರು.

ಮುಖ್ಯಮಂತ್ರಿಯೊಂದಿಗಿನ ಸಭೆಯಲ್ಲಿ ಯಾವ ವಿಚಾರವೂ ಇತ್ಯರ್ಥ ಆಗಿಲ್ಲ. ಸ್ವಾಮೀಜಿ ನೇತೃತ್ವದಲ್ಲಿ ನಾಳೆ ಹೋರಾಟ ನಡೆಯಲಿದೆ. ಕಾಂತರಾಜು ವರದಿಯಲ್ಲಿ ಕಾಂತರಾಜು ಆಯೋಗವು ಮಾದರಿಗಳನ್ನು ಸಂಗ್ರಹಿಸಿ ವರದಿ ಸಿದ್ಧಮಾಡಿದೆ. ಬಡತನದಲ್ಲಿರುವ ಲಿಂಗಾಯತರು ಮೀಸಲಾತಿ ಸಿಗಲಿದೆ ಎಂದು ಗಾಣಿಗ, ಕುಂಬಾರ ಅಂತ ಬರೆಸಿಕೊಂಡಿದ್ದಾರೆ ಎಂದು ಹೇಳಿದರು.

ಜಾತಿಗಣತಿಗೂ ಮೊದಲು ಹಿಂದಿನ ಬಿಜೆಪಿ ಸರಕಾರ ಕಲ್ಪಿಸಿದ್ದ 2ಸಿ ಮತ್ತು 2ಡಿ ಮೀಸಲಾತಿ ಜಾರಿ ಮಾಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಈ ಸಂಬಂಧ ವಿಚಾರ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಸರಕಾರ ನಿರ್ಧಾರ ತಗೆದುಕೊಳ್ಳಬೇಕು ಎಂದು ಅರವಿಂದ್ ಬೆಲ್ಲದ್ ಆಗ್ರಹಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ಬಿ.ಆರ್. ಪಾಟೀಲ್, ವಿಜಯಾನಂದ ಕಾಶಪ್ಪನವರ್, ಬಸನಗೌಡ ಪಾಟೀಲ್ ಯತ್ನಾಳ್, ವಿನಯ್ ಕುಲಕರ್ಣಿ, ಸಿ.ಸಿ. ಪಾಟೀಲ್, ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿದಂತೆ ಪಂಚಮಸಾಲಿ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News