ಸ್ವಚ್ಚತೆ, ನೈರ್ಮಲ್ಯ ಸಂರಕ್ಷಣೆಗೆ 2 ಸಾವಿರ ಕೋಟಿ ರೂ.ಮೀಸಲು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

Update: 2023-11-28 12:41 GMT

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಸ ವಿಲೇವಾರಿ, ಸ್ವಚ್ಚತೆ, ನೈರ್ಮಲ್ಯ ಸಂರಕ್ಷಣೆಗೆ 2 ಸಾವಿರ ಕೋಟಿ ಹಣ ಹಂಚಿಕೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಅರಮನೆ ಮೈದಾನದಲ್ಲಿ ನಡೆದ 17ನೇ ಅಂತಾರಾಷ್ಟ್ರೀಯ ಮುನ್ಸಿ ಪಾಲಿಕ-23 ಸಮ್ಮೇಳನದ ವಸ್ತುಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ಒಟ್ಟಾರೆ ಜನಸಂಖ್ಯೆಯ 7 ಕೋಟಿ ಆದರೆ ಶೇ.40ರಷ್ಟು ಅಂದರೆ 3.25 ಕೋಟಿ ಜನರು ನಗರ ಪ್ರದೇಶಗಳಲ್ಲಿ ವಾಸವಿದ್ದಾರೆ. ಬೆಂಗಳೂರಿನ ಜನಸಂಖ್ಯೆ 1 ಕೋಟಿ 40 ಲಕ್ಷಕ್ಕೆ ಮುಟ್ಟಿದೆ. ಏಕೆ ಜನರು ನಗರ ಪ್ರದೇಶಗಳಿಗೆ ಬರುತ್ತಿದ್ದಾರೆ ಎನ್ನುವ ಕುರಿತು ನಾವೆಲ್ಲಾ ಯೋಚನೆ ಮಾಡಬೇಕಿದೆ ಎಂದರು.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಟ್ಟು ನಿಟ್ಟಿನ ಆದೇಶ ನೀಡಿದ್ದು, ನಗರದ ಸ್ವಚ್ಚತೆ, ನೈರ್ಮಲ್ಯದ ಬಗ್ಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಕರ್ನಾಟಕಕ್ಕೆ ಬೆಂಗಳೂರು ಹೃದಯ. ಪ್ರತಿ ಜಿಲ್ಲೆಯ, ತಾಲೂಕಿನ ನಗರಗಳು ಹೃದಯಗಳಂತೆ ತಿಳಿದು ಅವುಗಳನ್ನು ಕಾಪಾಡಬೇಕು ಎಂದು ಸೂಚನೆ ನೀಡಿದರು.

ಕಟ್ಟಡ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಸುರಿಯುವ ಕೆಟ್ಟ ಚಾಳಿಯನ್ನು ಜನ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಅಲ್ಲಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ, ದಂಡ ವಿಧಿಸಬೇಕು. ನಗರದ ಕೆರೆ, ಉದ್ಯಾನಗಳ ಸುಂದರೀಕರಣ, ಹಸಿರೀಕರಣ ಮಾಡಬೇಕು ಹಾಗೂ ಮಳೆ ನೀರು ಕೆರೆಗೆ ಹರಿಯುಂತೆ ವ್ಯವಸ್ಥೆ ಮಾಡಬೇಕು. ರಸ್ತೆಗುಂಡಿಗಳನ್ನು ಮುಚ್ಚಲು ಇಂಜಿನಿಯರ್ ಗಳಿಗೆ ಸೂಚನೆ ನೀಡಬೇಕು. ಸಂಚಾರ ದಟ್ಟಣೆ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಗಮನ ಹರಿಸಬೇಕು ಎಂದು ಅವರು ಉಲ್ಲೇಖಿಸಿದರು.

ಎಲ್ಲ ಸ್ಥಳೀಯ ಸಂಸ್ಥೆಗಳು ರಸ್ತೆಬದಿ ಗಿಡಗಳನ್ನು ನೆಡಲು ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಈಗಾಗಲೇ ಸುಮಾರು 50 ಸಾವಿರಕ್ಕೂ ಹೆಚ್ಚು ಮಕ್ಕಳು ಬೆಂಗಳೂರು ನಗರದಲ್ಲಿ ಸಸಿಗಳನ್ನು ಕಾಪಾಡುವ, ನಿರ್ವಹಣೆ ಮಾಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನಮ್ಮ ಮನೆಗಳ ಒಳಗೆ ಹಸಿರು ಇರಬೇಕು ಎಂದು ಗಿಡಗಳನ್ನು ಬೆಳೆಸುತ್ತೇವೆ. ಪ್ರಕೃತಿಗೂ ಮನುಷ್ಯನಿಗೂ ಬಿಡಿಸಲಾಗದ ಸಂಬಂಧ ಇದಕ್ಕೆ ನಾವು ಶಕ್ತಿ ತುಂಬಬೇಕು ಎಂದ ಅವರು, ಆದಾಯ ಹೆಚ್ಚಳ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ನಾನು, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮತ್ತು ಪೌರಾಡಳಿತ ಸಚಿವ ರಹೀಂಖಾನ್ ಸಭೆ ಸೇರಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ಮನೆ ಬಾಗಿಲಿಗೆ ದಾಖಲೆ: ಬಿಡಿಎ, ಬಿಬಿಎಂಪಿ ವ್ಯಾಪ್ತಿಯ ಬೆಂಗಳೂರಿನ ಆಸ್ತಿ ಪತ್ರ ಮತ್ತು ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಕೆಲವೇ ದಿನಗಳಲ್ಲಿ ಸ್ವತ್ತಿನ ಪತ್ರಗಳನ್ನು ಜನರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗುವುದು ಎಂದ ಅವರು, ಹೊಸದಿಲ್ಲಿ, ಚಂಡಿಗಢದಂತೆ ನಮ್ಮ ರಾಜ್ಯಗಳಲ್ಲಿ ಯೋಜಿತವಾದ ನಗರಗಳಿಲ್ಲ. 20 ವರ್ಷಗಳ ಹಿಂದೆಯೇ ಕಾಂಗ್ರೆಸ್ ಸರಕಾರ ಭೂಮಿ ತಂತ್ರಾಶದ ಮೂಲಕ ಪಹಣಿ ನೀಡುವ ಯೋಜನೆ ಜಾರಿಗೆ ತಂದಿತ್ತು. ಪ್ರಸ್ತುತ ಆಸ್ತಿಮೌಲ್ಯವನ್ನು ನಿಖರವಾಗಿ ಲೆಕ್ಕಾಚಾರ ಮಾಡಲು ಅನೇಕ ತಂತ್ರಜ್ಞಾನಗಳು ನಮ್ಮ ನಡುವೆ ಇವೆ. ಡ್ರೋನ್ ಸೇರಿದಂತೆ ಇತರೇ ತಂತ್ರಜ್ಞಾನ ಬಳಸಿ ನಿಖರವಾಗಿ ಆಸ್ತಿಮೌಲ್ಯವನ್ನು ಲೆಕ್ಕ ಹಾಕಲಾಗುವುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News