ಬೆಂಗಳೂರಿಗೆ ಕುಡಿಯಲು 24 ಟಿಎಂಸಿ ಕಾವೇರಿ ನೀರು ಮೀಸಲಿರಿಸಿ ಆದೇಶ: ಡಿಸಿಎಂ ಡಿ.ಕೆ. ಶಿವಕುಮಾರ್

Update: 2023-11-08 09:50 GMT

ನವದೆಹಲಿ:  “ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಿಗೆ ಕುಡಿಯುವ ಉದ್ದೇಶಕ್ಕಾಗಿ ವಾರ್ಷಿಕವಾಗಿ 24 ಟಿಎಂಸಿ ಕಾವೇರಿ ನೀರನ್ನು ಮೀಸಲಾಗಿಡಲು ಮತ್ತು ಬಿಡಬ್ಲ್ಯೂ ಎಸ್ಎಸ್ ಬಿ ಅದನ್ನ ಬಳಸಿಕೊಳ್ಳಬೇಕು” ಎಂದು ಆದೇಶ ಹೊರಡಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, “2018 ರಲ್ಲಿ ಸುಪ್ರೀಂಕೋರ್ಟ್ ಬೆಂಗಳೂರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ 24 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು ಎಂದು ನಿಗದಿ ಮಾಡಿತ್ತು. ಆದರೆ ಇದುವರೆಗೂ ಯಾರೂ ಸಹ ಈ ವಿಚಾರವಾಗಿ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈ ಮೊದಲು ಕಡಿಮೆ ನೀರು ನಿಗದಿ ಮಾಡಲಾಗಿತ್ತು. ಈಗ ಉಳಿಕೆ 6 ಟಿಎಂಸಿ ನೀರನ್ನು ಬಳಸಿಕೊಂಡು, ಒಟ್ಟಾರೆ ಕುಡಿಯುವ ಉದ್ದೇಶಕ್ಕೆ 24 ಟಿಎಂಸಿ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ. ಪ್ರಸ್ತುತ ನಮ್ಮ ಕಾಂಗ್ರೆಸ್ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 89 ನೇ ಸಭೆಯಲ್ಲಿ ರಾಜ್ಯದ ಅಧಿಕಾರಿಗಳು, ಮೇಕೆದಾಟು ಅಣೆಕಟ್ಟು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಮುಂದಿನ ಸಭೆಯ ವೇಳೆಗೆ ಮೇಕೆದಾಟು ವಿಚಾರವಾಗಿ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ."

“ಪ್ರಾಧಿಕಾರ, ಸುಪ್ರೀಂ ಕೋರ್ಟ್ ಮುಂದೆ ಮೇಕೆದಾಟು ಯೋಜನೆ ಪ್ರಾರಂಭ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡುತ್ತೇವೆ. ಸಂಕಷ್ಟದ ಸಂದರ್ಭದಲ್ಲಿ ನೀರು ಹರಿಸಲು ಈ ಯೋಜನೆ ಸಹಕಾರಿಯಾಗುತ್ತದೆ, ಅಲ್ಲದೇ ತಮಿಳುನಾಡಿಗೆ ಈ ಯೋಜನೆಯಿಂದ ಹೆಚ್ಚು ಪ್ರಯೋಜನವಿದೆ. ಕಾವೇರಿ ನೀರು ಎಷ್ಟು ಪ್ರಮಾಣ ಉಳಿದುಕೊಳ್ಳುತ್ತದೆ, ಎಷ್ಟು ಹರಿದು ಹೋಗುತ್ತದೆ, ಎಷ್ಟು ಬಳಕೆಯಾಗುತ್ತದೆ ಎನ್ನುವ ವಿಚಾರವನ್ನು ಪ್ರಾಧಿಕಾರದ ಮುಂದೆ ಪ್ರಾತ್ಯಕ್ಷಿಕೆ ನೀಡುವ ವೇಳೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಸಂಕಷ್ಟಕಾಲದಲ್ಲೂ 300- 400 ಟಿಎಂಸಿ ನೀರು ಬಿಡಬೇಕು ಎಂದು ತಮಿಳುನಾಡಿನವರು ಕೇಳಿದ್ದರು. ಕೆಆರ್ ಎಸ್ ಗೆ ಒಳಹರಿವು ಸಂಪೂರ್ಣವಾಗಿ ನಿಂತೇ ಹೋಗಿದೆ. ಇಂತಹ ಸಂದರ್ಭವನ್ನು ಮನದಟ್ಟು ಮಾಡಿಕೊಡಬೇಕು ಎಂದು ನಿರ್ಧಾರ ಮಾಡಿದ್ದೇವೆ” ಎಂದರು.

ಬೆಂಗಳೂರಿಗೆ 24 ಟಿಎಂಸಿ ನೀರು ಬಳಕೆಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದರೆ ಎಂದು ಕೇಳಿದಾಗ “ಕುಡಿಯುವ ನೀರಿಗೆ ನಮ್ಮ ಮೊದಲ ಆದ್ಯತೆ, ಸುಪ್ರೀಕೋರ್ಟ್ ಕೊಟ್ಟಿರುವ ಆದೇಶವನ್ನು ಪಾಲಿಸುತ್ತಿದ್ದೇವೆ. ಅವರು ಏನಾದರೂ ಆಕ್ಷೇಪ ವ್ಯಕ್ತಪಡಿಸಲಿ, ನಮ್ಮ ಹಕ್ಕನ್ನು ನಾವೇಕೆ ಬಿಟ್ಟು ಕೊಡಬೇಕು. ಈ ಹಿಂದೆ ನೀಡಿರುವ ಆದೇಶವನ್ನೇ ಈಗ ಪಾಲಿಸುತ್ತಿದ್ದೇವೆ. ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಜೀವ ಕೊಟ್ಟಿದ್ದೇವೆ, ಕೆಆರ್ ಎಸ್ ಅಥವಾ ಕಾವೇರಿ ಜಲಾನಯನ ಪ್ರದೇಶದ ಯಾವುದೇ ಭಾಗದಲ್ಲಾದರೂ ಇಷ್ಟು ಪ್ರಮಾಣದ ನೀರನ್ನು ನಾವು ಮೀಸಲಿರಿಸುತ್ತೇವೆ” ಎಂದು ಉತ್ತರಿಸಿದರು.

ಮೇಕೆದಾಟು ವಿಚಾರವಾಗಿ ಚರ್ಚೆ ನಡೆಸಲು ದಿನಾಂಕ ನಿಗದಿಯಾಗಿದೆಯೇ ಎಂದು ಕೇಳಿದಾಗ “ಮುಂದಿನ ವಾರ ಚರ್ಚೆ ಮಾಡೋಣ ಎಂದು ಪ್ರಾಧಿಕಾರ ತಿಳಿಸಿದೆ. ಅವರ ಮುಂದೆ ವಿಚಾರ ಮಂಡಲಿಸಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಬೆಂಗಳೂರು ಬೆಳೆಯುತ್ತಿದೆ, ಇನ್ನು ಮುಂದಿನ 20 ವರ್ಷವನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಬೇಕು. ಆನೇಕಲ್, ಹಾರೋಹಳ್ಳಿ, ಬೆಂಗಳೂರು ಉತ್ತರ ಸೇರಿದಂತೆ ಸುತ್ತಲಿನ ಪ್ರದೇಶಗಳಿಗೆ ನೀರು ಕೊಡಲೇಬೇಕು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ನೀರು ಕೊಡುತ್ತಿದ್ದೇವೆ. ಈ ಮೊದಲು ನಾನು ನಗರಾಭಿವೃದ್ದಿ ಸಚಿವನಾಗಿದ್ದಾಗ ಹೆಬ್ಬಾಳದ ಮೇಲೆ ನೀರನ್ನು ಕೊಡುವುದು ಬೇಡ ಎಂದು ಅಧಿಕಾರಿಗಳು ಹೇಳಿದ್ದರು. ನಂತರದ ಸರ್ಕಾರದ ವೇಳೆಯಲ್ಲಿ ಇದಕ್ಕೆ ಸಹಿ ಹಾಕಿಸಿದ್ದರು. ಆದರೆ ಇಂದು ಬೆಂಗಳೂರು ಉತ್ತರವೇ ಹೆಚ್ಚು ಬೆಳೆಯುತ್ತಿದೆ, ನೀರು ಕೊಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ” ಎಂದರು.

ತಮಿಳುನಾಡಿನವರು ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ, ಅವರ ರಾಜ್ಯದ ಒಂದಷ್ಟು ನದಿಗಳನ್ನು ಜೋಡಣೆ ಮಾಡುವ ಕುರಿತು ಪ್ರಸ್ತಾಪ ಇರಿಸಿದ್ದಾರೆ, ಇದರಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತದಯೇ ಎಂದಾಗ “ಅದರ ಬಗ್ಗೆ ಈಗಲೇ ನಾನು ಉತ್ತರಿಸಲು ಹೋಗುವುದಿಲ್ಲ. ಅದು ಅವರ ರಾಜ್ಯದ ಆಂತರಿಕ ವಿಚಾರ. ನಮ್ಮ ರಾಜ್ಯದಲ್ಲಿ ನಾವು ಸಹ ಒಂದಷ್ಟು ಯೋಜನೆಗಳನ್ನು ಮಾಡುತ್ತೇವೆ, ಜೊತೆಗೆ ನಿಮಗೆ ನಿಗದಿಯಾಗಿರುವ ನೀರಿನ ಪ್ರಮಾಣವನ್ನು ಬಿಡುತ್ತೇವೆ. ಹೀಗಾಗಿ ತಮಿಳುನಾಡು ನಮಗೆ ಯಾವುದೇ ತೊಂದರೆ ನೀಡಬಾರದು” ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News