ಸಿಇಟಿ ಫಲಿತಾಂಶ ವಿಳಂಬದಿಂದ 3 ಸಾವಿರ ಕೋಟಿ ರೂ.ಗಳ ಹಗರಣ: ಎಎಪಿ ಆರೋಪ

Update: 2024-05-31 17:29 GMT

Photo credit: PTI

ಬೆಂಗಳೂರು: ಸಿಇಟಿ ಫಲಿತಾಂಶ ಪ್ರಕಟಿಸಲು ಸರಕಾರ ವಿಳಂಬ ಮಾಡುವ ಮೂಲಕ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಅನುಕೂಲ ಮಾಡಿಕೊಟ್ಟಿದ್ದು, ಇದು ಸುಮಾರು ಮೂರು ಸಾವಿರ ಕೋಟಿ ರೂ.ಗಳ ಹಗರಣವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.

ಶುಕ್ರವಾರ ನಗರದ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ ಮಾತನಾಡಿ, ‘ಸಿಇಟಿ ಪರೀಕ್ಷೆ ಮುಗಿದು ಸುಮಾರು 42 ದಿನ ಆಗಿದೆ. ಆದರೆ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ಆದರೂ ಉನ್ನತ ಶಿಕ್ಷಣ ಇಲಾಖೆ ಈಗಾಗಲೇ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಅನುಮತಿ ನೀಡಿದೆ ಎಂದು ಹೇಳಿದರು.

ಇದು ಸುಮಾರು ಮೂರು ಸಾವಿರ ಕೋಟಿ ರೂ. ಹಗರಣವಾಗಿದೆ. 60 ಸಾವಿರ ಸೀಟುಗಳನ್ನು ಮಾರಾಟಕ್ಕೆ ಇಡಲಾಗಿದೆ. ಒಂದು ಸೀಟಿಗೆ 3 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳವರೆಗೆ ಮಾರಾಟ ಮಾಡುತ್ತಿದ್ದಾರೆ. ಎಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಸರಕಾರಿ ಸೀಟು ಸಿಗುತ್ತದೋ ಇಲ್ಲವೋ ಎಂದು ನಾಲ್ಕೈದು ಕಾಲೇಜಗಳಿಗೆ ಹೋಗಿ ಅರ್ಜಿ ಹಾಕುತ್ತಿದ್ದಾರೆ. ಒಂದು ಅಪ್ಲಿಕೇಶನ್‍ಗೆ ಸುಮಾರು 1,200 ರೂ. ವಸೂಲಿ ಮಾಡುತ್ತಿವೆ. ಒಂದು ಖಾಸಗಿ ಕಾಲೇಜಿನಲ್ಲಿ 35 ಸಾವಿರ ಅರ್ಜಿಗಳನ್ನು ಮಾರಾಟ ಮಾಡಿದೆ, ಒಂದು ಅಪ್ಲಿಕೇಶನ್‍ಗೆ 1,200 ರೂಪಾಯಿ ಆದರೆ ಸುಮಾರು 4.80 ಕೋಟಿ ರೂ. ಅರ್ಜಿಯಿಂದಲೇ ದುಡಿಮೆ ಮಾಡಿದೆ ಎಂದು ವಿವರಿಸಿದರು.

ಸಿಇಟಿ ಫಲಿತಾಂಶ ಪ್ರಕಟಿಸುವ ಮುನ್ನವೇ ಖಾಸಗಿ ಕಾಲೇಜುಗಳಿಗೆ ಪ್ರವೇಶ ಪ್ರಕ್ರಿಯೆಗೆ ಸರಕಾರ ಅನುಮತಿ ನೀಡಿರುವುದು ಯಾಕೆ? ಲಕ್ಷ ಲಕ್ಷ ಹಣ ಕಟ್ಟಿ ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕಿಂಗ್ ಪಡೆದು, ಸರಕಾರಿ ಹಾಗೂ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತ ಸೀಟು ಸಿಕ್ಕಿದರೆ, ಪ್ರತಿಯೊಬ್ಬ ಪೋಷಕರು ಕಟ್ಟಿದ್ದ ಲಕ್ಷಾಂತರ ರೂಪಾಯಿಗಳು ವಾಪಸ್ಸು ಬರುವುದಿಲ್ಲ ಎಂದರು.

ನಾಲ್ಕೈದು ಲಕ್ಷ ಕಟ್ಟಿ, ಎರಡನೇ ಹಾಗೂ ಇನ್ನುಳಿದ ಸುತ್ತಿನಲ್ಲಿ ಉಚಿತ ಸೀಟು ಪಡೆದರೆ ಅವರು ಕಟ್ಟಿರುವ ಹಣದ ಗತಿಯೇನು? ರಾಷ್ಟ್ರ ಮಟ್ಟದಲ್ಲಿ ನಡೆಯುವ ಅನೇಕ ಪರೀಕ್ಷೆಗಳು ಒಂದೆರಡು ವಾರದಲ್ಲಿ ಫಲಿತಾಂಶ ಘೋಷಣೆ ಮಾಡಲಾಗುತ್ತದೆ. ಆದರೆ ಸಿಇಟಿ ಪರೀಕ್ಷೆ ನಡೆದು ಒಂದೂವರೆ ತಿಂಗಳಾದರೂ ಇನ್ನೂ ಫಲಿತಾಂಶ ಘೋಷಣೆಯಾಗದಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಸಿಲಿಕಾನ್ ಸಿಟಿ ಎಂದು ಹೆಸರು ಮಾಡಿರುವ ಬೆಂಗಳೂರಿನಲ್ಲಿ ಪರೀಕ್ಷಾ ಫಲಿತಾಂಶ ಇμÉ್ಟೂಂದು ವಿಧಾನವಾಗುತ್ತಿರುವುದರಿಂದ ದೊಡ್ಡ ಮಟ್ಟದ ಕುತಂತ್ರವಿರುವುದು ಸಾಬೀತಾಗುತ್ತಿದೆ. ಓಎಂಆರ್ ಶೀಟ್‍ಗಳಲ್ಲಿ ಗೋಲ್ಮಾಲ್ ಆಗುವ ಸಾಧ್ಯತೆಯೂ ಸಾಕಷ್ಟು ಇರುತ್ತದೆ ಎಂದು ನಾಗಣ್ಣ ದೂರಿದರು.

ಖಾಸಗಿ ಕಾಲೇಜುಗಳಲ್ಲಿ ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸಿಇಟಿ ಫಲಿತಾಂಶದ ಬಳಿಕ ಸರಕಾರಿ ಸೀಟು ಸಿಕ್ಕಾಗ, ಅವರು ಕಟ್ಟಿರುವ ಪೂರ್ತಿ ಶುಲ್ಕವನ್ನು ಖಾಸಗಿ ಕಾಲೇಜುಗಳು ವಾಪಸ್ ಕೊಡುವಂತೆ ಸರಕಾರ ಆದೇಶ ಕೊಡಬೇಕು, ಇಲ್ಲವಾದಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಭಾರಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ಕರ್ನಾಟಕದಲ್ಲಿ ಮೂರು ಪಕ್ಷಗಳ ರಾಜಕಾರಣಿಗಳ ಖಾಸಗಿ ಕಾಲೇಜುಗಳು ಇರುವ ಕಾರಣ, ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಎಲ್ಲ ರಾಜಕಾರಣಿಗಳೂ ಒಗ್ಗಟ್ಟಾಗಿ ಶಿಕ್ಷಣವನ್ನು ದಂಧೆ ಮಾಡಿಕೊಂಡಿದ್ದಾರೆ. ಬೇಜವಾಬ್ದಾರಿ ಉನ್ನತ ಶಿಕ್ಷಣ ಸಚಿವರಿಗೆ ಜನ ಸಾಮಾನ್ಯರ ಕಷ್ಟ ಅರ್ಥ ಆಗುತ್ತಿಲ್ಲವಾ? ಮುಖ್ಯಮಂತ್ರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಿ ಖಾಸಗಿ ಕಾಲೇಜುಗಳಿಗೆ ಸೂಚನೆ ಕೊಡಬೇಕು’

-ಬಿ.ಟಿ.ನಾಗಣ್ಣ, ಎಎಪಿ ರಾಜ್ಯ ಸಂಘಟನಾ ಕಾರ್ಯದರ್ಶಿ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News