ಸಚಿವ ಚಲುವರಾಯಸ್ವಾಮಿಯಿಂದ 300 ಕೋಟಿ ರೂ. ಲೂಟಿ: ಮಾಜಿ ಶಾಸಕ ಸುರೇಶ್‍ಗೌಡ ಆರೋಪ

Update: 2023-08-16 13:26 GMT

ಮಂಡ್ಯ, ಆ.16: ಭ್ರಷ್ಟಾಚಾರದಲ್ಲಿ ಸಚಿವ ಚಲುವರಾಯಸ್ವಾಮಿ ನಂಬರ್ ಒನ್. ಅಧಿಕಾರ ಸಿಕ್ಕಾಗ ಜನರಿಗೆ ಒಳ್ಳೆಯದು ಮಾಡಬೇಕು. ಆದರೆ, ಇವರು ಅಧಿಕಾರಿಗಳ ವರ್ಗಾವಣೆಯಲ್ಲಿ 150 ಕೋಟಿ ರೂ., ಜಲಧಾರೆ ಯೋಜನೆಯಲ್ಲಿ 100 ಕೋಟಿ ರೂ., ಅಧಿಕಾರಿಗಳ ಬಳಿ ಲೂಟಿ ಹೀಗೆ 300 ಕೋಟಿ ರೂ. ಚಲುವರಾಯಸ್ವಾಮಿ ಒಬ್ಬನೇ ಲೂಟಿ ಹೊಡೆದಿದ್ದಾನೆ ಎಂದು ನಾಗಮಂಗಲದ ಮಾಜಿ ಶಾಸಕ ಕೆ.ಸುರೇಶ್‍ಗೌಡ ಆರೋಪಿಸಿದ್ದಾರೆ.

ಮದ್ದೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಆಗ ಎಲ್ಲೆಲ್ಲಿ ಎಷ್ಟೊಂದು  ತಿಂದಿದ್ದಾನೆ ಗೊತ್ತಾಗುತ್ತದೆ. ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷನದು ಬೆಂಗಳೂರಿನಲ್ಲಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದೆ. ಅಲ್ಲಿ ಚಲುವರಾಯಸ್ವಾಮಿ ಎಷ್ಟು ಬ್ಲಾಕ್ ಮನಿ ವೈಟ್ ಮಾಡಿದ್ದಾನೆ? ಅದೆಲ್ಲವೂ ಆಚೆ ಬರುತ್ತದೆ. ಬೆಳ್ಳೂರು ಕ್ರಾಸ್‍ನಲ್ಲಿ ಪೆಟ್ರೋಲ್ ಬಂಕ್ ಮಾಲಕರ ಹತ್ತಿರ ಎಷ್ಟು ಕಲೆಕ್ಷನ್ ಮಾಡುತ್ತಿದ್ದಾನೆ? ಎಲ್ಲವೂ ಜನರಿಗೆ ಗೊತ್ತಾಗಲಿ” ಎಂದು ಅವರು ವಾಗ್ದಾಳಿ ನಡೆಸಿದರು.

“ತಿಂದವನು ಕಕ್ಕಲೇಬೇಕು. ಮುಂದೆ ಎಲ್ಲ ಗೊತ್ತಾಗುತ್ತೆ. ಅಧಿಕಾರಿಗಳು ಪತ್ರ ಬರೆದದ್ದು ಸತ್ಯ. ಬೆಂಗಳೂರಿನ 37 ಕ್ರೆಸೆಂಟ್ ಹೊಟೇಲ್‍ಗೆ ಅಧಿಕಾರಿಗಳನ್ನು ಕರೆಸಿಕೊಂಡು ಒತ್ತಡ ಹೇರಿದ್ದಾರೆ. ಎಲ್ಲ ಬಿಗಿ ಭದ್ರತೆ ಮಾಡಿಕೊಂಡು, ಅಧಿಕಾರಿಗಳು ಪತ್ರ ಬರೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ. 37 ಕ್ರೆಸೆಂಟ್ ಹೊಟೇಲ್ ಹಾಗೂ ಆ ರಸ್ತೆಯ ಸಿಸಿಟಿವಿ ದೃಶ್ಯ ತೆಗೆಸಿ. ಆಗ ಯಾವ ಎಡಿ, ಜೆಡಿ ಯಾರೆಲ್ಲಾ ಹೋಗಿದ್ದರು ತಿಳಿಯುತ್ತದೆ” ಎಂದು ಅವರು ದೂರಿದರು.

“ನನ್ನ ಚರಿತ್ರೆ ಬಗ್ಗೆ ಮಾತನಾಡುತ್ತಾನೆ. ಇವನ ಚರಿತ್ರೆ ಹಳಸಿ ಹೋಗಿದೆ. ಇವನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ನೊಣ ಬಿದ್ದ ನಮ್ಮ ತಟ್ಟೆಯನ್ನು ನೋಡುತ್ತಾನೆ. ನಾನು ಸೋತಿದ್ದೀನಿ, ಸತ್ತಿಲ್ಲ. 30 ರಿಂದ 40 ಸಾವಿರ ಅಂತರದಲ್ಲಿ ಸೋತಿದ್ದರೆ ರಾಜಕಾರಣವನ್ನೇ ಬಿಟ್ಟು ಬಿಡುತ್ತಿದ್ದೆ. 47 ಸಾವಿರ ಅಂತರದಲ್ಲಿ ಸೋತವನೆ ತಲೆ ಎತ್ತಿಕೊಂಡು ಬಂದಿದ್ದಾನೆ. ನಾನು 4 ಸಾವಿರ ಅಂತರದಲ್ಲಿ ಸೋತವನು ಏಕೆ ತಲೆ ಕೆಡಿಸಿಕೊಳ್ಳಬೇಕು? ನಾನು ಎಲ್ಲರಿಗೂ ಗೌರವ ಕೊಡುತ್ತೇನೆ. ಆದರೆ, ಚಲುವರಾಯಸ್ವಾಮಿ ಬಗ್ಗೆ ನನಗೆ ಭಯವೂ ಇಲ್ಲ, ಗೌರವವೂ ಇಲ್ಲ” ಎಂದು ಟೀಕಿಸಿದರು.

“ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ ಮಾಡಿ ದುಡ್ಡನ್ನು ಏರ್‍ಲಿಫ್ಟ್ ಮಾಡುತ್ತಿದೆ. ಹಿಂದಿನ ಸರಕಾರ ಜೆಸಿಬಿಯಲ್ಲಿ ಹಣ ತುಂಬುತ್ತಿದೆ ಎನ್ನುತ್ತಿದ್ದರು. ಆದರೆ, ಈ ಸರಕಾರ ಭ್ರಷ್ಟ ಹಣವನ್ನು ಏರ್‍ಲಿಫ್ಟ್ ಮಾಡುತ್ತಿದೆ. ಇವರು ರಾಜ್ಯವನ್ನೇ ಲೂಟಿ ಹೊಡೆಯುತ್ತಿದ್ದಾರೆ.”

-ಕೆ.ಸುರೇಶ್‍ಗೌಡ, ಮಾಜಿ ಶಾಸಕ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News