ಬೆಸ್ಕಾಂ, ಕೆಎಸ್ಸಾರ್ಟಿಸಿ ಸಹಿತ 34 ಸರಕಾರಿ ಸಂಸ್ಥೆಗಳ ನಿವ್ವಳ ಮೌಲ್ಯ ಶೂನ್ಯ: ಸಿಎಜಿ ವರದಿ

Update: 2023-07-13 12:29 GMT

ಬೆಂಗಳೂರು: ಮಾರ್ಚ್‌ 2022 ರಲ್ಲಿ ಅಂತ್ಯಗೊಂಡ ವಿತ್ತ ವರ್ಷದಲ್ಲಿ ರಾಜ್ಯದ ನಾಲ್ಕು ಎಸ್ಕಾಂಗಳು (ಬೆಸ್ಕಾಂ, ಹೆಸ್ಕಾಂ, ಸಿಇಎಸ್‌ಸಿ ಮತ್ತು ಜೆಸ್ಕಾಂ), ಸಾರಿಗೆ ಸಂಸ್ಥೆಗಳಾದ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಸಹಿತ 34 ಸಾರ್ವಜನಿಕ ರಂಗದ ಸಂಸ್ಥೆಗಳ ನಿವ್ವಳ ಮೌಲ್ಯ “ಶೂನ್ಯ ಅಥವಾ ಋಣಾತ್ಮಕವಾಗಿದೆ” ಎಂದು ತನ್ನ ರಾಜ್ಯ ವಿತ್ತ ಆಡಿಟ್‌ ವರದಿಯಲ್ಲಿ ಸಿಎಜಿ ಹೇಳಿದೆ ಎಂದು deccanherald.com ವರದಿ ಮಾಡಿದೆ,

ಆಡಿಟ್‌ ವರದಿಯಲ್ಲಿ ಉಲ್ಲೇಖಗೊಂಡ ಸಾರ್ವಜನಿಕ ರಂಗದ ಸಂಸ್ಥೆಗಳಲ್ಲಿ ಲಿಡ್ಕರ್‌, ಮೈಶುಗರ್‌, ಕರ್ನಾಟಕ ಪಲ್ಪ್‌ವುಡ್‌ ಲಿಮಿಟೆಡ್‌, ಕೆಎಸ್‌ಟಿಡಿಸಿ ಕೂಡ ಸೇರಿವೆ.

ರಾಜ್ಯದಲ್ಲಿ 125 ಸಾರ್ವಜನಿಕ ರಂಗದ ಸಂಸ್ಥೆಗಳು, ಆರು ನಿಗಮಗಳು ಮತ್ತು 119 ಸರಕಾರಿ ಕಂಪೆನಿಗಳಿವೆ.

ಸಿಎಜಿ ವರದಿ ಪ್ರಕಾರ ಒಟ್ಟು 54 ಸಾರ್ವಜನಿಕ ರಂಗದ ಸಂಸ್ಥೆಗಳ ಒಟ್ಟು ಕ್ರೋಢೀಕರಿಸಿದ ನಷ್ಟಗಳು ರೂ. 37,893.24 ಕೋಟಿ ಆಗಿದೆ. ಇವುಗಳಲ್ಲಿ ಎರಡು ಸಂಸ್ಥೆಗಳಾದ ಕರ್ನಾಟಕ ಸ್ಟೇಟ್‌ ವೆನೀರ್ಸ್‌ ಲಿ. ಮತ್ತು ಮೈಸೂರ್‌ ಕಾಸ್ಮೆಟಿಕ್ಸ್‌ ಲಿ. ಲಿಕ್ವಿಡೇಶನ್‌ ಹಂತದಲ್ಲಿವೆ ಎಂದು ವರದಿ ಹೇಳಿವೆ.

ವರದಿಯಲ್ಲಿ ಉಲ್ಲೇಖಿಸಲಾದ 54 ಸಾರ್ವಜನಿಕ ರಂಗದ ಸಂಸ್ಥೆಗಳಲ್ಲಿ 34 ಸಂಸ್ಥೆಗಳ ನಿವ್ವಳ ಮೌಲ್ಯ ರೂ. 17,912.56 ಆಗಿದ್ದು, ಈಕ್ವಿಟಿ ಹೂಡಿಕೆ ರೂ. 9,095.51 ಕೋಟಿ ಆಗಿದೆ.

ನಿವ್ವಳ ಮೌಲ್ಯ ಶೂನ್ಯವಾಗಿರುವ 35 ಸಾರ್ವಜನಿಕ ರಂಗದ ಸಂಸ್ಥೆಗಳ ಪೈಕಿ 26ರಲ್ಲಿ ಸರಕಾರದ ಸಾಲ ಮಾರ್ಚ್‌ 2022 ರಲ್ಲಿದ್ದಂತೆ ರೂ. 42,567.68 ಕೋಟಿ ಆಗಿದೆ.

ಲಾಭ ಹೊಂದಿರುವ ಸಾರ್ವಜನಿಕ ರಂಗದ ಸಂಸ್ಥೆಗಳು 2021-22ರಲ್ಲಿ 55 ಆಗಿದ್ದವು. ಇದು ಅದಕ್ಕಿಂತ ಹಿಂದಿನ ವರ್ಷದ 50ಕ್ಕಿಂತ ಹೆಚ್ಚಾಗಿದ್ದರೂ, 2020-21 ರಲ್ಲಿ ಲಾಭ ರೂ 2,987 ಕೋಟಿ ಆಗಿದ್ದರೆ 2021-22ರಲ್ಲಿ ಇದು ರೂ 2,608.22 ಕೋಟಿಗೆ ಇಳಿಕೆಯಾಗಿದೆ.

ಸಾರ್ವಜನಿಕ ರಂಗದ ಸಂಸ್ಥೆಗಳು ನಿಗದಿತ ಸಮಯಮಿತಿಯಲ್ಲಿ ಮತ್ತು ಲೆಕ್ಕಪತ್ರಗಳನ್ನು ಕಂಪನಿಗಳ ಕಾಯಿದೆಯಂತೆ ಸಲ್ಲಿಸುತ್ತಿಲ್ಲ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News