ಕೋಲಾರ: ಮಾಲೂರು ಶಾಸಕರ ಮನೆಯಲ್ಲಿ 40 ತಾಸುಗಳ ಇ.ಡಿ. ಶೋಧ ಅಂತ್ಯ
ಕೋಲಾರ, ಜ.10 : ಕೋಚಿಮುಲ್ ಅಧ್ಯಕ್ಷ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಟೇಕಲ್ ಹೋಬಳಿಯ ಕೊಮ್ಮನಹಳ್ಳಿಯಲ್ಲಿರುವ ಮನೆಯಲ್ಲಿ ಇ.ಡಿ. ಅಧಿಕಾರಿಗಳ ಸತತ 40 ಗಂಟೆಗಳ ಶೋಧ ಕಾರ್ಯಾಚರಣೆ ಮಂಗಳವಾರ ರಾತ್ರಿ 10 ಗಂಟೆ ವೇಳೆ ಮುಕ್ತಾಯಗೊಂಡಿದೆ.
ಇ.ಡಿ. ಅಧಿಕಾರಿಗಳು ಮನೆಯಿಂದ ತೆರಳಿದ ಬಳಿಕ ಶಾಸಕ ನಂಜೇಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನ್ನ ಆಸ್ತಿಗೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ಈ ನಡುವೆ ನನ್ನ ತಮ್ಮನ ಮಗಳಿಗೆ ಮಾರ್ಚ್ 31ರಂದು ಮದುವೆ ನಿಶ್ಚಯವಾಗಿದ್ದು, ಆಕೆಗೆ ವಸ್ತ್ರಗಳನ್ನು ಖರೀದಿಸುವುದಕ್ಕಾಗಿ ಇಟ್ಟ 16 ಲಕ್ಷ ರೂ. ನಗದು ಮನೆಯಲ್ಲಿತ್ತು. ಅದು ಮದುವೆಯ ಹಣ ತೆಗೆದುಕೊಂಡು ಹೋಗದಂತೆ ಕೇಳಿದರೂ ಅಧಿಕಾರಿಗಳು ಬಿಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇ.ಡಿ. ಮೂರು ವಿಚಾರಗಳ ಬಗ್ಗೆ ಪ್ರಶ್ನೆ ಮಾಡಿದರು. ಮೊದಲಿಗೆ ಕೋಚಿಮುಲ್ ನೇಮಕಾತಿ ಬಗ್ಗೆ, ಎರಡನೆಯದಾಗಿ ಮಾಲೂರು ತಾಲೂಕಿನ ದರಕಾಸ್ತು ಸಮಿತಿ ಬಗ್ಗೆ, ಮೂರನೆಯದಾಗಿ ನನ್ನ ವ್ಯಾಪಾರ ವಹಿವಾಟಿನ ಬಗ್ಗೆ ಪ್ರಶ್ನೆ ಮಾಡಿದರು. ಎಲ್ಲದಕ್ಕೂ ಸಹಕರಿಸಿದ್ದೇನೆ , ಮಾಹಿತಿ ಹಾಗೂ ಉತ್ತರ ನೀಡಿದ್ದೇನೆ ಎಂದರು.
ಇ.ಡಿ. ಅಧಿಕಾರಿಗಳು ಯಾಕೆ ಬಂದರು ಎಂದು ನಾನು ಚರ್ಚೆ ಮಾಡುವುದಿಲ್ಲ. ಆದರೆ, ಒಬ್ಬ ಸಾಮಾನ್ಯ ಶಾಸಕನ ಮನೆಯಲ್ಲಿ ಇ.ಡಿ. ಶೋಧ ನಡೆಸಿರುವುದು ನೋವು ತಂದಿದೆ. ತಾಲೂಕಿನ ಜನತೆಗೆ ಅವಮಾನವಾಗುಂತದ್ದನ್ನು ಏನೂ ಮಾಡಿಲ್ಲ, ನನ್ನನ್ನು ಮುಗಿಸಲು ಪ್ರಯತ್ನಿಸಿದರೂ ಮಾಲೂರಿನ ಜನತೆ ಹಾಗೂ ದೇವರು ನನ್ನ ಕೈ ಬಿಡುವುದಿಲ್ಲ ಹಾಗಾಗಿ ನನಗೂ ಏನೂ ಆಗುವುದಿಲ್ಲ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ವಿಚಾರಣೆಗೆ ತಿಳಿಸಿದಾಗ ಬರಬೇಕೆಂದು ತಿಳಿಸಿದ್ದಾರೆ. ಯಾವುದೇ ಸಂದರ್ಭದಲ್ಲಿ ಕರೆದರೂ ಬರುವುದಾಗಿ ಹೇಳಿದ್ದೇನೆ. ಕಾಂಗ್ರೆಸ್ ನವರ ಮೇಲೆ ಯಾವ ರೀತಿ ಇ.ಡಿ. ದಾಳಿ ನಡೆಸಲಾಗುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಅವರು ಹೇಳಿದರು.
ನಂಜೇಗೌಡರ ಮನೆಗೆ ಸೋಮವಾರ ಮುಂಜಾವ 5:30ರ ಸುಮಾರಿಗೆ ಬಂದ ಸುಮಾರು 20 ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಸತತ 40 ಗಂಟೆಗಳ ಕಾಲ ಮನೆಯಲ್ಲಿ ಶೋಧ ನಡೆಸಿ ಎರಡನೇ ದಿನವಾದ ಮಂಗಳವಾರ ರಾತ್ರಿ 10 ಕಾರ್ಯಾಚರಣೆ ಮುಗಿಸಿದ್ದಾರೆ.