5 ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 48 ರಿಂದ 60 ಸಾವಿರ ರೂ. ಸೌಲಭ್ಯ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಸಮಾನತೆಯ ಹೊಸ ಹಾದಿಯಲ್ಲಿ ಸಾಗಿದ ಬುದ್ಧ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ನಮ್ಮ ಸರ್ಕಾರ ರಾಜ್ಯದ ಜನರಲ್ಲಿನ ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮಂಗಳವಾರ ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ 77ನೇ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಸಿ.ಎ.ಆರ್. ಆರ್.ಪಿ.ಐ ಮಹಾದೇವ ಪಾಟೀಲ, ಡಿ.ಎ.ಆರ್. ಆರ್.ಎಸ್.ಐ ಗುರುಬಸವರಾಜ ನೇತೃತ್ವದ 14 ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 48 ರಿಂದ 60 ಸಾವಿರ ರೂ. ಸೌಲಭ್ಯ ಲಭಿಸಲಿದೆ. ಜಾತಿ-ಧರ್ಮವಿಲ್ಲದೆ ಸರ್ವ ಜನಾಂಗದ ಅಭಿವೃದ್ಧಿಯೇ ಈ ಜನಪರ ಸರ್ಕಾರದ ಧ್ಯೇಯವಾಗಿದೆ. ಜನಪರ ಆಶಯಗಳೊಂದಿಗೆ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ ಧ್ವನಿ ಇಲ್ಲದವರಿಗೆ ಧ್ವನಿಯಾಗಲು, ದುರ್ಬಲರಿಗೆ ಶಕ್ತಿ ತುಂಬಲು, ಸಾಮಾಜಿಕ ಹಾಗೂ ಆರ್ಥಿಕ ಚೇತನವನ್ನು ನೀಡುವ ಸಲುವಾಗಿಯೇ ಐದು ಗ್ಯಾರೆಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ರಾಜ್ಯದ ಕೋಟ್ಯಂತರ ಕುಟುಂಬಗಳ ಸಬಲೀಕರಣಕ್ಕೆ ಕಾರಣವಾಗಿದೆ ಎಂದರು.
ವೈಯಕ್ತಿಕ ಆಸೆಗಳನ್ನು ಬದಿಗರಿಸಿ ದೇಶಕ್ಕಾಗಿ ದುಡಿದು ತ್ಯಾಗ ಬಲಿದಾನಗಳಿಂದ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರ ದೇಶಾಭಿಮಾನ ಅಸಾಮಾನ್ಯ. ಮಹಾತ್ಮ ಗಾಂಧೀಜಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಜವಹಾರ ಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅನೇಕ ರಾಷ್ಟ್ರ ನಾಯಕರ ಸೇವೆ ಸ್ಮರಿಸಿದ ಅವರು, ನಾಯಕರ ತ್ಯಾಗ, ಬಲಿದಾನಗಳ ಫಲವಾಗಿ ಇಂದು ಭಾರತದಲ್ಲಿ ನಿರ್ಭಯವಾಗಿ ಬದುಕಲು ಅವಕಾಶ ಕಲ್ಪಿಸಿದೆ ಎಂಬುದನ್ನು ನಮ್ಮ ಯುವ ಪೀಳಿಗೆಗೆ ಮನದಟ್ಟು ಮಾಡುವ ಕೆಲಸವಾಗಬೇಕಿದೆ. ಭದ್ರ ಭಾರತದ ಅಡಿಪಾಯ ಹಾಕಿದ ನಮ್ಮ ನಾಯಕರ ಆಶಯಗಳು ಮತ್ತು ಕನಸುಗಳನ್ನು ನನಸಾಗಿಸಲು ನಾವೆಲ್ಲರೂ ಸಂಕಲ್ಪ ಮಾಡಿ ಮುನ್ನಡೆಯಬೇಕಿದೆ ಎಂದರು.
ವಿಶೇಷವಾಗಿ ಯುವಜನಾಂಗ ರಾಷ್ಟ್ರೀಯ ಪ್ರಜ್ಞೆಯೊಂದಿಗೆ ಪರಂಪರೆ, ಪರಿಸರ ಹಾಗೂ ಪರಿಶ್ರಮದ ಪ್ರಜ್ಞೆ ಬೆಳೆಸಿಕೊಳ್ಳಲು ಪ್ರಾಮಾಣಿಕವಾಗಿ ಹಾಗೂ ಶ್ರದ್ಧೆ, ವಿಶಾಲ ಮನೊಭಾವ, ದೃಢಸಂಕಲ್ಪ, ಶಿಸ್ತು ಮತ್ತು ಸಂಯಮಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಯುವ ಜನಾಂಗಕ್ಕೆ ಕರೆ ನೀಡಿದರು.
ಜಿಲ್ಲೆಯ ಯುವ ಜನರ ಸಬಲೀಕರಣಕ್ಕಾಗಿ ಕಲಬುರಗಿಯಲ್ಲಿ ರಾಜೀವ್ ಗಾಂಧಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ, ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯ ಹಾಗೂ Allied Health Sciences ಕಾಲೇಜುಗಳು ಸ್ಥಾಪನೆಯಾಗಲಿವೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಪದವೀಧರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿ ಸರ್ಕಾರಿ ವೃತ್ತಿಗಳಲ್ಲಿ ತೊಡಗಿಕೊಳ್ಳುವ ಸಲುವಾಗಿ ಕಲಬುರಗಿಯ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಸುಮಾರು 2,000 ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ತರಬೇತಿ ನೀಡುವ "Centre of Excellence for Competative Examinations" ಕೇಂದ್ರ ನಿರ್ಮಾಣ ಮಾಡಲಾಗಿದೆ. ಪ್ರದೇಶದ ಯುವಕ ಯುವತಿಯರು ಈ ತರಬೇತಿ ಕೇಂದ್ರದ ಸೌಲಭ್ಯ ಪಡೆದು ಸರ್ಕಾರದ ವಿವಿಧ ಹುದ್ದೆಗಳನ್ನು ಪಡೆದುಕೊಳ್ಳುವಂತಾಗಲಿ ಎಂದು ಹಾರೈಸುವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಕ ಯುವತಿಯರಿಗೆ ನೆರವಾಗಲು ಕಲ್ಯಾಣ ಕರ್ನಾಟಕ ಎಲಿವೇಟ್ ಕಾರ್ಯಕ್ರಮದಡಿ ನವೋದ್ಯಮಗಳನ್ನು ಆರಂಭಿಸಲು ಪ್ರೋತ್ಸಾಹ ನೀಡಲಾಗುತ್ತದೆ. ನಮ್ಮ ಭಾಗದ ಯುವಜನರನ್ನು ನೂತನ ತಂತ್ರಜ್ಞಾನ ವಿಭಾಗಗಳಲ್ಲಿ ಉದ್ಯಮಶೀಲರನ್ನಾಗಿಸುವ ಸಲುವಾಗಿ ಕೌಶಲ್ಯಾಭಿವೃದ್ದಿ ಇಲಾಖೆ ಸಹಯೋಗದೊಂದಿಗೆ Skill Council for Emerging Technologies ಅನ್ನು ಸ್ಥಾಪಿಸಲಾಗಿದೆ. ಇದರಿಂದ ಐ.ಟಿ-ಬಿ.ಟಿ ವಲಯದಲ್ಲಿ ಹೆಚ್ಚಿನ ಉದ್ಯೋಗಾವಕಾಶ ದೊರೆಯಲಿದೆ ಎಂದು ಸಚಿವರು ನುಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ “ಪ್ರಬುದ್ಧ ಭಾರತ” ಮತ್ತು ಬಸವಣ್ಣನವರ “ಅರಿವೇ ಗುರು” ನಮ್ಮ ಸಮಾಜದ ಪ್ರತಿಯೊಬ್ಬರಲ್ಲೂ ಮಾರ್ದನಿಸಬೇಕು. ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳು ಶ್ರೀಸಾಮಾನ್ಯರ ವಿಶ್ವದ್ಯಾಲಯಗಳಾಗಬೇಕು ಎಂಬ ಪರಿಕಲ್ಪನೆಯಿಂದ ಹೊಸ ಸೇವೆಗಳೊಂದಿಗೆ ಗ್ರಾಮದ ಗ್ರಂಥಾಲಯಗಳನ್ನು "ಅರಿವು ಕೇಂದ್ರ" ಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಜಿಲ್ಲೆಯಲ್ಲಿನ 261 ಗ್ರಾಮ ಪಂಚಾಯತಿಯ ಅರಿವು ಕೇಂದ್ರಗಳಿಗೆ ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಸಿ.ಎಸ್.ಆರ್ ನಿಧಿಯಡಿ 26 ಲಕ್ಷ ರೂ. ವೆಚ್ಚದಲ್ಲಿ ತಲಾ 41 ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳನ್ನು ಪೂರೈಸಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 400 ಸಮುದಾಯ ಶೌಚಾಲಯ ಸಂಕೀರ್ಣ ನಿರ್ಮಾಣಕ್ಕೆ ಸರ್ಕಾರ 100 ಕೋಟಿ ರೂ. ಅನುದಾನ ನೀಡಿದ್ದು, ಜಿಲ್ಲೆಯ 108 ಗ್ರಾಮಗಳಲ್ಲಿ ಸಮುದಾಯ ಶೌಚಾಲಯಗಳನ್ನು ವಿಶಿಷ್ಟ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಸ್ಥಳೀಯ ಆಡಳಿತವನ್ನು ಬಲಪಡಿಸುವ ಸಲುವಾಗಿ ಪ್ರತಿ ತಾಲ್ಲೂಕಿನಲ್ಲಿ ಒಬ್ಬ ನುರಿತ ಯುವ ಪದವೀಧರರನ್ನು 24 ತಿಂಗಳ ಅವಧಿಗೆ 'ಮುಖ್ಯಮಂತ್ರಿಗಳ ಫೆಲೋಶಿಪ್' ಗೆ ಆಯ್ಕೆ ಮಾಡಲಾಗುವುದು. ಇದಕ್ಕಾಗಿ 10 ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಒಣ ತ್ಯಾಜ್ಯ ವಿಲೇವಾರಿಯಲ್ಲಿ ಸುಸ್ಥಿರತೆಯನ್ನು ಕಾಪಾಡಲು ಮತ್ತು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವ ಸಲುವಾಗಿ ಕಲಬುರ್ಗಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ Material Recovery Facility ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಮ್ಮ ಭಾಷಣದಲ್ಲಿ ತಿಳಿಸಿದರು.
ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ 70 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಯ ಹೊಸ “ತಾಯಿ ಮತ್ತು ಮಕ್ಕಳ ಆಸ್ಪತ್ರೆ” ನಿರ್ಮಾಣ ಮಾಡಲಾಗುತ್ತಿದೆ. ಕಲಬುರಗಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭಿಸಲು ಮತ್ತು ಸುಟ್ಟ ಗಾಯಗಳ ಘಟಕ ಸ್ಥಾಪಿಸಲಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನೀಡಲು ಕಲಬುರಗಿಯಲ್ಲಿ ಈಗಾಗಲೆ ಟ್ರಾಮಾ ಕೇರ್ ಸೆಂಟರ್ ಕಟ್ಟಡ ನಿರ್ಮಿಸಿದ್ದು, ಶೀಘ್ರವೇ ಅದರ ಕಾರ್ಯಾಚರಣೆ ಆರಂಭಿಸಲಾಗುವುದು. ಕಲಬುರಗಿ ತಾಲೂಕಿನ ಫರಹತಾಬಾದ್ ಮತ್ತು ಹಿರೇಸಾವಳಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಲಾ 3.5 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಿಸಲಾಗಿದೆ. 10 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯನ್ನು ಉನ್ನತಿಕರಿಸಲಾಗುತ್ತಿದೆ ಎಂದರು.