ಏಳು ವರ್ಷಗಳಲ್ಲಿ 60 ಸಾವಿರ ಮೆ.ವ್ಯಾ.ವಿದ್ಯುತ್ ಉತ್ಪಾದನೆ ಗುರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2024-03-09 16:20 GMT

Photo:X/@siddaramaiah

ಬೆಂಗಳೂರು: ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ರಾಜ್ಯ ಸರಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಮುಂದಿನ ಏಳು ವರ್ಷಗಳಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹಾಕಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶನಿವಾರ ನಗರದ ಜಿಕೆವಿಕೆ ಆವರಣದಲ್ಲಿ ಇಂಧನ ಇಲಾಖೆ ವತಿಯಿಂದ ಆಯೋಜಿಸಿದ್ದ ‘ರೈತ ಸೌರಶಕ್ತಿ ಮೇಳ'ವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮೊದಲ ಅವಧಿಯ ಸರಕಾರದಲ್ಲಿ ಎಲ್ಲ ಸಮಸ್ಯೆಗಳ ನಡುವೆಯೆ ವಿದ್ಯುತ್ ಉತ್ಪಾದನೆ ಪ್ರಮಾಣ ದುಪ್ಪಟ್ಟಾಗಿತ್ತು ಎಂದರು.

ನಾವು ಅಧಿಕಾರಕ್ಕೆ ಬಂದ 2013-14ರಲ್ಲಿ 14,048 ಮೆಗಾವ್ಯಾಟ್ ಉತ್ಪಾದನೆ ಆಗುತ್ತಿತ್ತು. 2017-18ರ ವೇಳೆಗೆ 27,780 ಮೆಗಾವ್ಯಾಟ್‍ಗೆ ಉತ್ಪಾದನೆ ಏರಿಕೆಯಾಗಿತ್ತು. ಆದರೆ, ನಂತರ ಬಂದಂತಹ ಸಮ್ಮಿಶ್ರ ಸರಕಾರ ಹಾಗೂ ಬಿಜೆಪಿ ಸರಕಾರ ಇದೇ ರೀತಿ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಿಕೊಂಡು ಬಂದಿದ್ದರೆ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಯೆ ಎದುರಾಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕದಲ್ಲಿ ಪ್ರಸಕ್ತ 32 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ, ಮುಂದಿನ ಏಳು ವರ್ಷಗಳಲ್ಲಿ 60 ಸಾವಿರ ಮೆಗಾವ್ಯಾಟ್ ಉತ್ಪಾದನೆಯ ಗುರಿ ಹಾಕಿಕೊಂಡಿದ್ದೇವೆ. ಸದ್ಯ ನವೀಕರಿಸಬಹುದಾದ ಇಂಧನದ ಪಾಲು ಶೇ.63ರಷ್ಟಿದೆ ಎಂದು ಅವರು ವಿವರಿಸಿದರು.

ಇಡೀ ವಿಶ್ವದಲ್ಲೆ ಗಮನ ಸೆಳೆದ ಸೋಲಾರ್ ಪಾರ್ಕ್ ಅನ್ನು ತುಮಕೂರಿನ ಪಾವಗಡದಲ್ಲಿ ನಿರ್ಮಾಣ ಮಾಡಿದೆವು. ಡಿ.ಕೆ.ಶಿವಕುಮಾರ್ ಆಗ ಇಂಧನ ಸಚಿವರಾಗಿದ್ದರು. ರೈತರಿಂದ ಜಮೀನು ಖರೀದಿಸದೆ, ಅವರನ್ನು ಪಾಲುದಾರರನ್ನಾಗಿ ಮಾಡಿ ಈ ಯೋಜನೆ ಮಾಡಿದ್ದು, ವಿಶ್ವಕ್ಕೆ ಮಾದರಿ ಆಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜ್ಯ ಸರಕಾರ ಸಮಗ್ರ ಕೃಷಿಗೆ ಒತ್ತು ನೀಡುತ್ತದೆ. ಹೈನುಗಾರಿಕೆ, ಮೀನುಗಾರಿಕೆ ತೋಟಗಾರಿಕೆ ಸೇರಿದಂತೆ ಬಹು ಕೃಷಿ ಪದ್ಧತಿ ರೂಢಿಸಿಕೊಂಡಾಗ ಮಾತ್ರ ರೈತರ ಆದಾಯ ಹೆಚ್ಚಲು ಸಾಧ್ಯ. ಅದೆ ರೀತಿ ಕೃಷಿ ಕ್ಷೇತ್ರದಲ್ಲಿ ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.

ಸೌರ ಶಕ್ತಿ ಕ್ಷೇತ್ರದಲ್ಲಿ ಆಗಿರುವಂಥ ಬೆಳವಣಿಗೆ ರೈತರನ್ನು ತಲುಪಿ, ಕೃಷಿಯಲ್ಲಿ ಬಳಸಿಕೊಂಡಾಗ ಮಾತ್ರ ಅದು ಸಾರ್ಥಕವಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಂಶೋಧನೆಗಳಾಗಿ, ಅದು ರೈತರಿಗೆ ತಲುಪಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ರೈತರು ಒಣ ಭೂಮಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿಕೊಂಡು ಕೃಷಿ ಮಾಡುವಂತಾಗಬೇಕು. ಯುವಜನರು ಗ್ರಾಮಗಳನ್ನು ತೊರೆದು ನಗರಗಳನ್ನು ಸೇರುತ್ತಿದ್ದಾರೆ. ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿ, ಅದನ್ನು ರೈತರು ಅಳವಡಿಸಿಕೊಂಡಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.

ಮನೆ ಬೆಳಗಿದೆ ಗೃಹಜ್ಯೋತಿ: ಸಾಮಾಜಿಕ, ಆರ್ಥಿಕ ಅಸಮಾನತೆ ನಿವಾರಿಸಲು ನಮ್ಮ ಸರಕಾರ ಮಹಿಳೆಯರು, ಹಿಂದುಳಿದವರು, ಯುವಕರಿಗೆ ಶಕ್ತಿ ತುಂಬಲು 5 ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಗೃಹ ಜ್ಯೋತಿ ಯೋಜನೆಯಡಿ 200ಯೂನಿಟ್ ವರೆಗೆ 1.67 ಕೋಟಿ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಇದಕ್ಕಾಗಿ 5,120ಕೋಟಿ ರೂ.ಗಳ ಸಹಾಯಧನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ, ಗೃಹಲಕ್ಷ್ಮಿ ಯೋಜನೆಯಡಿ 1.17 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ನೀಡುತ್ತಿದ್ದೇವೆ. ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲು ಪ್ರತಿಯೊಬ್ಬರಿಗೆ 170ರೂ.ನೀಡುತ್ತಿದ್ದೇವೆ. ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ತೆ ನೀಡುತ್ತಿದ್ದೇವೆ. ಜತೆಗೆ ಕೌಶಲ ಅಭಿವೃದ್ಧಿಗೂ ಒತ್ತು ನೀಡಿದ್ದೇವೆ. ರೈತರಿಗೆ 2 ಸಾವಿರ ರೂ.ವರೆಗೆ ಬರ ಪರಿಹಾರ ನೀಡಲು 631ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸೌರ ಪಂಪ್‍ಸೆಟ್ ಬಳಕೆಯೆ ಪರಿಹಾರ. ಹಾಗಾಗಿ, ಈ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಲು ‘ರೈತ ಸೌರ ಶಕ್ತಿ ಮೇಳ' ಆಯೋಜಿಸಲಾಗಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಸೌರ ಪಂಪ್ ಸೆಟ್ ಅಳವಡಿಸಿಕೊಳ್ಳಲು ಉತ್ತೇಜಿಸಲು ರಾಜ್ಯ ಸರಕಾರದಿಂದ ಈವರೆಗೆ ನೀಡಲಾಗುತ್ತಿದ್ದ ಶೇ.30ರಷ್ಟು ಸಹಾಯಧನವನ್ನು ಶೇ.50ಕ್ಕೆ ಹೆಚ್ಚಿಸಲಾಗಿದೆ ಎಂದರು.

ಕೇಂದ್ರ ಸರಕಾರುವ ಶೇ.30ರಷ್ಟು ಸಹಾಯಧನ ನೀಡುವುದರಿಂದ, ರೈತರು ಈಗ ಕೇವಲ ಶೇ.20ರಷ್ಟು ಮಾತ್ರ ಭರಿಸಬೇಕಿದೆ. ರೈತರಿಗೆ ಪಂಪ್, ಮೀಟರ್, ಪೈಪ್‍ಗಳನ್ನು ಒದಗಿಸಲಾಗುವುದು. ಮುಖ್ಯಮಂತ್ರಿಯ ಸಲಹೆ ಮೇರೆಗೆ ರೈತರಿಗೆ 7 ತಾಸು ವಿದ್ಯುತ್ ನೀಡಲಾಗುತ್ತಿದೆ.

ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮಾಡುವಂತೆ ಉತ್ತೇಜಿಸಲು ನಮ್ಮ ಸರಕಾರ ‘ಕುಸುಮ್ ಬಿ' ಯೋಜನೆಯ ಅನುಷ್ಠಾನಕ್ಕೆ ಒತ್ತು ನೀಡುತ್ತಿದೆ. ಹೊಸ ಮಾದರಿಯ ಸೌರ ಪಂಪ್‍ಸೆಟ್‍ಗಳ ಪ್ರಾತ್ಯಕ್ಷಿಕೆಯನ್ನು ನೋಡಿ, ಈ ವಿಚಾರವಾಗಿ ಇರುವ ಗೊಂದಲಗಳನ್ನು ರೈತರು ಪರಿಹರಿಸಿಕೊಳ್ಳಬಹುದು ಎಂದು ಜಾರ್ಜ್ ಹೇಳಿದರು.

ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಹಾಗೂ ನಸೀರ್ ಅಹ್ಮದ್, ಪರಿಷತ್ ಸದಸ್ಯ ಸುಧಾಮದಾಸ್, ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕ್ರೆಡಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News