ರಾಜ್ಯದಲ್ಲಿ ವಾಡಿಕೆಗಿಂತ ಶೇ.78ರಷ್ಟು ಹೆಚ್ಚು ಮಳೆ: ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ರಾಜ್ಯದಲ್ಲಿ ಜೂ.2ರಂದು ಮುಂಗಾರು ಪ್ರವೇಶ ಮಾಡಿದೆ. 10 ದಿನಗಳ ಅವಧಿಯಲ್ಲಿ ವಾಡಿಕೆ ಪ್ರಕಾರ 51 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಈಗಾಗಲೆ 91 ಮಿ.ಮೀ. ಆಗಿದೆ. ಇದು ವಾಡಿಕೆಗಿಂತ ಶೇ.78ರಷ್ಟು ಹೆಚ್ಚು ಮಳೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಬರ ವಿಚಾರಕ್ಕೆ ಸಂಬಂಧಿಸಿದ ಸಚಿವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 9 ಮಿ.ಮೀ. ಮಳೆಯಾಗಿತ್ತು ಎಂದರು.
ಮುಂಗಾರು ರಾಜ್ಯದ ಎಲ್ಲ ಭಾಗಗಳಲ್ಲೂ ಆವರಿಸಿದೆ. 5 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾದರೆ, 4 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. 22 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಮೇ ತಿಂಗಳಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದ ಹಳ್ಳಿಗಳ ಸಂಖ್ಯೆ 542 ಇತ್ತು. ಈಗ ಅದು 374ಕ್ಕೆ ಇಳಿದಿದೆ. ಮುಂದಿನ 15 ದಿನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಆಗಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಕೇಂದ್ರ ಸರಕಾರದ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ನ್ಯಾಯಾಂಗ ಹೋರಾಟ ಮಾಡಿದ ಬಳಿಕ ನಮಗೆ 3454 ಕೋಟಿ ರೂ. ಬರ ಪರಿಹಾರ ಬಂದಿದೆ. ಈಗಾಗಲೆ 27.5 ಲಕ್ಷ ರೈತರಿಗೆ ಮೇ ಮೊದಲ ವಾರದಲ್ಲಿ 2451 ಕೋಟಿ ರೂ.ಪರಿಹಾರ ನೀಡಿದ್ದೇವೆ. ನಾಲೆಗಳ ಮೂಲಕ ನೀರು ಬರದೆ ಬೆಳೆಹಾನಿ ಅನುಭವಿಸಿದಂತಹ ಸುಮಾರು 7 ಲಕ್ಷ ರೈತರಿಗೆ ಒಂದು ವಾರದಲ್ಲಿ ಪರಿಹಾರ ನೀಡಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
17.09 ಲಕ್ಷ ಸಣ್ಣ, ಅತಿ ಸಣ್ಣ ರೈತ ಕುಟುಂಬಗಳಿಗೆ ತಲಾ 2800-3000 ರೂ.ಗಳಂತೆ ಜೀವನೋಪಾಯ ಪರಿಹಾರ ನೀಡಲಾಗುವುದು. ಇದಕ್ಕಾಗಿ ಎನ್‍ಡಿಆರ್‍ಎಫ್ ಅಡಿಯಲ್ಲಿ 232 ಕೋಟಿ ರೂ. ಹಾಗೂ ಎಸ್‍ಡಿಆರ್‍ಎಫ್ ಅಡಿಯಲ್ಲಿ ನಾವು 232 ಕೋಟಿ ರೂ.ಸೇರಿಸಿದೇವೆ. ಒಟ್ಟು 40-41 ಲಕ್ಷ ರೈತರಿಗೆ ಪರಿಹಾರ ಪಾವತಿ ವಿತರಣೆ ಮಾಡಿದಂತಾಗುತ್ತೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಹಗೂ ರಾಜ್ಯ ಸರಕಾರದ ಬಾಬತ್ತು ಸೇರಿ 4320 ಕೋಟಿ ರೂ., ಈಗಾಗಲೆ ಪಾವತಿಯಾಗಿರುವ ವಿಮೆ ಮೊತ್ತ 1654 ಕೋಟಿ ರೂ. ಹಾಗೂ ಇನ್ನೂ ಪಾವತಿಗೆ ಬಾಕಿಯಿರುವ 808 ಕೋಟಿ ರೂ.ಗಳನ್ನು ಪಾವತಿ ಮಾಡಿದರೆ ಸುಮಾರು 6 ಸಾವಿರ ಕೋಟಿ ರೂ.ಗಳಷ್ಟು ಪರಿಹಾರವನ್ನು ಕಳೆದ ವರ್ಷ ಬರಕ್ಕೆ ನೀಡಿದಂತಾಗುತ್ತದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಉಪಸ್ಥಿತರಿದ್ದರು.
ಪೂರ್ವ ಮುಂಗಾರಿಯಲ್ಲಿ ಶೇ.31ರಷ್ಟು ಹೆಚ್ಚು ಮಳೆ: ರಾಜ್ಯದಲ್ಲಿ ಪೂರ್ವ ಮುಂಗಾರಿನಲ್ಲಿ ಸಾಮಾನ್ಯವಾಗಿ 115 ಮಿ.ಮೀ. ಮಳೆಯಾಗುತ್ತದೆ. ಮೇ 31ಕ್ಕೆ ಮುಂಚಿತವಾಗಿ ಈ ಬಾರಿ 151 ಮಿ.ಮೀ. ಮಳೆಯಾಗಿದೆ. ಇದು ವಾಡಿಕೆಗಿಂತ ಶೇ.31ರಷ್ಟು ಹೆಚ್ಚು ಮಳೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.