ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ 80,000 ಹೆಕ್ಟೇರ್ ಬೆಳೆ ನಾಶ: ಸಚಿವ ಕೃಷ್ಣಭೈರೇಗೌಡ
ಬೆಂಗಳೂರು: ಪ್ರಸಕ್ತ ಮುಂಗಾರಿನ ಅವಧಿಯಲ್ಲಿ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಿದ್ದು, ಇದರ ಪರಿಣಾಮ ಹಲವೆಡೆ ಒಟ್ಟಾರೆ 80,000 ಹೆಕ್ಟೇರ್ ಬೆಳೆ ನಾಶವಾಗಿದೆ. ಇದೇ ವಾರದೊಳಗಾಗಿ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಬೆಂಗಳೂರು ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಒಳನಾಡಿನಲ್ಲಿ ವಾಡಿಕೆ ಪ್ರಕಾರ 260 ಮಿ.ಮೀ ಮಳೆಯಾಗಬೇಕು. ಆದರೆ, ಪ್ರಸ್ತುತ 322 ಮಿ.ಮೀ ಮಳೆಯಾಗಿದೆ. ಅಂದರೆ ವಾಡಿಕೆಗಿಂತ ಶೇ.24 ರಷ್ಟು ಹೆಚ್ಚು ಮಳೆಯಾಗಿದೆ. ಮಲೆನಾಡು ಭಾಗದಲ್ಲಿ 1127 ಮಿ.ಮೀ ವಾಡಿಕೆ ಮಳೆ ಪ್ರಮಾಣವಾಗಿದ್ದು, ಪ್ರಸ್ತುತ 1361 ಮಿ.ಮೀ ಅಂದರೆ ಶೇ.21ರಷ್ಟು ಹೆಚ್ಚು ಮಳೆಯಾಗಿದೆ ಎಂದರು.
ಅದೇ ರೀತಿ, ಕರಾವಳಿ ಭಾಗದಲ್ಲಿ ವಾಡಿಕೆಯ ಮಳೆ 2299 ಮಿ.ಮೀ ಆಗಿದ್ದು, ಪ್ರಸ್ತುತ 2947 ಮಿ.ಮೀ ಅಂದರೆ ಶೇ.28 ರಷ್ಟು ಮಳೆಯಾಗಿದೆ. ರಾಜ್ಯಾದ್ಯಂತ ಸರಾಸರಿ ಮಳೆಯ ಪ್ರಮಾಣ 553 ಮಿ.ಮೀ ಆಗಿದ್ದು, ಪ್ರಸ್ತುತ 699 ಮಿ.ಮೀ ಮಳೆಯಾಗಿದ್ದು, ಈ ಪ್ರಮಾಣ ಶೇ.26ರಷ್ಟು ಹೆಚ್ಚು. ವಿಶೇಷವೆಂದರೆ ಈ ವರ್ಷ ಯಾವ ಜಿಲ್ಲೆಯಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿಲ್ಲ ಎಂದು ವಿವರಿಸಿದರು.
ಕಳೆದ ತಿಂಗಳು ಬಯಲುಸೀಮೆ ಪ್ರದೇಶಗಳಲ್ಲಿ ಮಳೆ ಕೊರತೆ ಎದುರಾಗಿತ್ತು. ಕೋಲಾರ ಚಿಕ್ಕಬಳ್ಳಾಪುರ ಯಾದಗಿರಿ ಕೊಪ್ಪಳ, ವಿಜಯಪುರ, ರಾಯಚೂರು ಪ್ರದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಆದರೆ, ಕಳೆದ 10 ದಿನಗಳ ಹಿಂದೆ ಆ ಭಾಗಗಳಲ್ಲೂ ಸಹ ಉತ್ತಮ ಮಳೆಯಾಗಿದೆ. ಅಲ್ಲದೆ, ಆ.16 ರಿಂದ ಮುಂಗಾರು ಮತ್ತೆ ಚುರುಕಾಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮುಂಗಾರಿನ ಪ್ರಭಾವ ಉತ್ತಮವಾಗಿರುವ ಬಗ್ಗೆ ಮಾಹಿತಿ ಇದೆ. ಈ ವರ್ಷ ವಾಡಿಕೆಗಿಂತ ಭಿತ್ತನೆಯೂ ಹೆಚ್ಚಾಗಿದ್ದು, ಒಳ್ಳೆಯ ಕೃಷಿ ಚಿತ್ರಣ ಕಾಣುವ ನಿರೀಕ್ಷೆ ಇದೆ ಎಂದು ನುಡಿದರು.
ಮುಂಗಾರಿನ ಪ್ರಭಾವ ಇನ್ನೂ ಒಂದೂವರೆ ತಿಂಗಳು ಇರಲಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಮಧ್ಯ ಕರ್ನಾಟಕ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಭಾಗ ಹಾಗೂ ಕೃಷ್ಣ-ಕಾವೇರಿ ನದಿಪಾತ್ರದ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಈ ಎಲ್ಲ ಭಾಗದಲ್ಲೂ ಅನಗತ್ಯ ನೆರೆಸ್ಥಿತಿಯನ್ನು ತಡೆಯಲು ಮುಂಜಾಗ್ರತಾ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.
ಪ್ರಸಕ್ತ ಸಾಲಿನ ಮಳೆಗಾಲದಲ್ಲಿ 1126 ಮನೆಗಳು ಸಂಪೂರ್ಣ ಕುಸಿದಿದ್ದರೆ, ಅನಧೀಕೃತವಾಗಿ ನಿರ್ಮಿಸಲಾಗಿರುವ 75 ಮನೆಗಳೂ ಕುಸಿದಿವೆ. ಇದಲ್ಲದೆ, 1176 ಮನೆಗಳು ತೀವ್ರ ಹಾನಿಗೆ ಒಳಗಾಗಿದ್ದರೆ, 2338 ಮನೆಗಳು ಭಾಗಶಃ ಹಾನಿಯಾಗಿವೆ. ಒಟ್ಟಾರೆ 8,000 ಮನೆಗಳು ಹಾನಿಗೆ ಒಳಗಾಗಿವೆ. ಅನಧೀಕೃತ ಮನೆಗಳ ಬಗ್ಗೆಯೂ ನಮ್ಮ ಸರಕಾರ ಸಾಕಷ್ಟು ಉದಾರವಾಗಿಯೇ ನಡೆದುಕೊಳ್ಳುತ್ತಿದ್ದು, ಮನೆಹಾನಿಯಾದ ಎಲ್ಲರಿಗೂ ಈಗಾಗಲೇ ಪರಿಹಾರ ಒದಗಿಸಲಾಗಿದೆ ಎಂದರು.