ದಾವಣಗೆರೆ: ಕಾರು ಅಡ್ಡಗಟ್ಟಿ 95 ಲಕ್ಷ ರೂ. ದೋಚಿದ ದರೋಡೆಕೋರರು
ಚನ್ನಗಿರಿ (ದಾವಣಗೆರೆ): ಕಾರು ಅಡ್ಡಗಟ್ಟಿ ಪಿಸ್ತೂಲು ತೋರಿಸಿ ದರೋಡೆಕೋರರ ತಂಡವೊಂದು ಸುಮಾರು 95 ಲಕ್ಷ ಹಣ ದೋಚಿರುವ ಘಟನೆ ಬೀರೂರು–ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿನ ಬುಕ್ಕಾಂಬುದಿ ಕೆರೆ ಬಳಿ ವರದಿಯಾಗಿದೆ.
ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸುಮಾರು 15 ರಿಂದ 16 ಜನ ಇದ್ದ ತಂಡ ಹಣ ದೋಚಿ ಪರಾರಿಯಾಗಿದೆ. ಅಲ್ಲದೇ ಕಾರಿನಲ್ಲಿದ್ದವರನ್ನು ಬೇರೆ, ಬೇರೆ ಕಡೆ ಬಿಟ್ಟು ಪರಾರಿಯಾಗಿದ್ದಾರೆನ್ನಲಾಗಿದೆ.
ಜೂನ್ 18ರ ಬೆಳಗ್ಗೆ 10ರ ಸುಮಾರಿಗೆ ದರೋಡೆ ನಡೆದಿದೆ ಎಂದು ಆರೋಪಿಸಿ, ದುಬೈನಲ್ಲಿ ತೈಲ ವ್ಯಾಪಾರ ಮಾಡುತ್ತಿರುವ ನಬೀಲ್ಕೆ ಎಂಬುವವರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
‘ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಸಾನೆ ಗುರೂಜಿ ಪಟ್ಟಣದಲ್ಲಿ ನಮ್ಮದೊಂದು ಚಿನ್ನಾಭರಣದ ಅಂಗಡಿ ಇದೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ವಾಸವಿರುವ ನಮ್ಮ ಕುಟುಂಬ ಊರಲ್ಲೇ ಚಿನ್ನಾಭರಣ ಅಂಗಡಿ ತೆರೆಯುವ ಉದ್ದೇಶದಿಂದ ಸಾನೆ ಗುರೂಜಿಯಲ್ಲಿದ್ದ ಅಂಗಡಿಯಲ್ಲಿನ ಆಭರಣ ಮಾರಿ, ಅಲ್ಲಿಂದ ₹ 95 ಲಕ್ಷ ನಗದು ತೆಗೆದುಕೊಂಡು ಬರುವಾಗ ದರೋಡೆ ನಡೆದಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೀಲೇಶ್ ಹಾಗೂ ಅಭಿಜಿತ್ ಈ ಹಣದೊಂದಿಗೆ ಕಾರಿನಲ್ಲಿ ವಿರಾಜಪೇಟೆಗೆ ಬರುತ್ತಿದ್ದಾಗ 10 ರಿಂದ 15 ಜನರಿದ್ದ ದರೋಡೆಕೋರರ ತಂಡ ಬುಕ್ಕಾಂಬುದಿ ಕೆರೆ ಬಳಿ ಕಾರು ಅಡ್ಡಗಟ್ಟಿತ್ತು. ಪಿಸ್ತೂಲ್ ತೋರಿಸಿ ಹಣ ದೋಚಿ ಪರಾರಿಯಾಗಿತ್ತು. ನೀಲೇಶ್‌ನನ್ನು ಬೆಂಗಳೂರಿನ ಬಳಿ, ಅಭಿಜಿತ್‌ನನ್ನು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬಳಿ ಬಿಟ್ಟು ಹೋಗಿದ್ದರು’ ಎಂದು ಹೇಳಿದ್ದಾರೆ.
‘ದುಬೈನಿಂದ ಬರಲು ವಿಮಾನದ ಟಿಕೆಟ್ ದೊರೆಯದ್ದರಿಂದ ತಡವಾಗಿ ಬಂದು ದೂರು ನೀಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.
‘ಬುಕ್ಕಾಂಬುದಿ ಕೆರೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕು ವ್ಯಾಪ್ತಿಗೆ ಒಳಪಡುವುದರಿಂದ ಪ್ರಕರಣವನ್ನು ಅಜ್ಜಂಪುರ ಠಾಣೆಗೆ ವರ್ಗಾಯಿಸಲಾಗಿದೆ’ ಎಂದು ಚನ್ನಗಿರಿ ಠಾಣೆ ಪಿಎಸ್ಐ ಪ್ರಕಾಶಗೌಡ ಪಾಟೀಲ್ ತಿಳಿಸಿದ್ದಾರೆ.