ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಬಸ್; ಚಾಲಕನ ವಿರುದ್ಧ ಪ್ರಕರಣ ದಾಖಲು
ರಾಮನಗರ: ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಒಂದು ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಚಲಿಸುತ್ತಿದ್ದ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ವೀಡಿಯೊ ವೈರಲ್ ಆದ ಬಳಿಕ ಬಿಡದಿ ಠಾಣೆ ಪೊಲೀಸರು ಚಾಲಕನ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜುಲೈ 14ರಂದು ಅಭಿಷೇಕ್ ಎಂಬವರು ಬಿಡದಿ ಬಳಿ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಮೈಸೂರು ಕಡೆಗೆ ವೇಗವಾಗಿ ಚಲಿಸುತ್ತಿರುವ ಬಸ್ಸಿನ ವೀಡಿಯೊ ಹಂಚಿಕೊಂಡಿದ್ದರು. ''ಸರಕಾರಿ ವಾಹನಗಳಿಗೆ ನಿಯಮಗಳನ್ನು ಉಲ್ಲಂಘಿಸಲು ಅನುಮತಿಸಲಾಗಿದೆಯೇ? '' ಎಂದು ಅವರು ಕೆಎಸ್ಸಾರ್ಟಿಸಿ ಹಗೂ ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದರು.
ಈ ಟ್ವಿಟರ್ ಪೋಸ್ಟ್ ಗಮನಿಸಿದಾಗ, ''ಬಸ್ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿರುವುದು ಕಂಡುಬಂದಿತ್ತು. ಪೋಸ್ಟ್ ಆಧರಿಸಿ, ಬಸ್‌ನ ನಂಬರ್ ನಮೂದಿಸಿಕೊಂಡು ಚಾಲಕನ ವಿರುದ್ಧ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.