ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮರ್ಥ ಸಮಿತಿ ರಚನೆಯಾಗಲಿ: ಪ್ರೊ.ನಿರಂಜನಾರಾಧ್ಯ ವಿ.ಪಿ.‌ ಆಗ್ರಹ

Update: 2023-09-24 17:09 GMT

ನಿರಂಜನಾರಾಧ್ಯ

ಬೆಂಗಳೂರು, ಸೆ.24: ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮರ್ಥ ಮತ್ತು ಪ್ರಾತಿನಿಧಿಕ ಸಮಿತಿಯನ್ನು ರಚನೆ ಮಾಡಬೇಕಿದೆ. ಪ್ರಾಮಾಣಿಕ ಚಿಂತಕರು, ಅಲ್ಪಸಂಖ್ಯಾತರು ಸೇರಿದಂತೆ ಮಹಿಳೆಯರಿಗೆ ಸಮಿತಿಯಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಒತ್ತಾಯಿಸಿದ್ದಾರೆ.

ರವಿವಾರ ಶಾಸಕರ ಭವನದಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ ಫೆಡರೇಷನ್(ಎಐಎಸ್‍ಎಫ್) ವತಿಯಿಂದ ಆಯೋಜಿಸಿದ್ದ ‘ದುಂಡು ಮೇಜಿನ ಸಭೆ’ಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಟಾನ ಮಾಡಲು ಪ್ರಯತ್ನಿಸಿತ್ತು. ಅದಕ್ಕೆ ಸಂಬಂಧಿಸಿದಂತೆ ಸಮಿತಿಯನ್ನೂ ರಚನೆ ಮಾಡಿತ್ತು. ಆದರೆ ಸಮಿತಿಯಲ್ಲಿ ಶಿಕ್ಷಣ ತಜ್ಞರೇ ಇರಲಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ರಾಷ್ಟೀಯ ಶಿಕ್ಷಣ ನೀತಿ ಅನುಷ್ಠಾನ ಮಾಡುವ ವಿಚಾರವಾಗಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈಗಿರುವ ಕಾಂಗ್ರೆಸ್ ಸರಕಾರ ಜ್ಞಾನ ಕೇವಲ ಒಂದು ವರ್ಗಕ್ಕೆ ಪ್ರತಿಬಿಂಬಿಸಲಾಗಿರುವ ನೀತಿಯನ್ನು ನಿರಾಕರಿಸಿದ್ದು, ರಾಜ್ಯ ಶಿಕ್ಷಣ ನೀತಿಯನ್ನು ಜಾರಿ ಮಾಡುವುದಾಗಿ ತಿಳಿಸಿದೆ. ಹಾಗಾಗಿ ನೀತಿಯನ್ನು ಹೇಗೆ ರೂಪಿಸುತ್ತಾರೆ ನೋಡಬೇಕಿದೆ. ಶಿಕ್ಷಣ ವ್ಯವಸ್ಥೆಯನ್ನು ಸಂವಿಧಾನದ ಆಶಯದಂತೆ ಕಟ್ಟಬೇಕಿದೆ. ಹಾಗಾಗಿ ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ ಮಾಡಬೇಕಿದೆ ಎಂದರು.

ಎಸಿ ರೂಂನಲ್ಲಿ ಕುಳಿತುಕೊಂಡು ಮಾತನಾಡಿದವರು ಶಿಕ್ಷಣ ತಜ್ಞರಾಗುವುದಿಲ್ಲ. ಈ ಬಾರಿ ರಾಜ್ಯ ಶಿಕ್ಷಣ ನೀತಿ ರೂಪಿಸುವವರು ಯೋಗ್ಯರಾಗಿರಬೇಕು ಎಂದು ನಿರಂಜನಾರಾಧ್ಯ ವಿ.ಪಿ. ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಚಿಂತಕ ಡಾ. ಸಿದ್ದನಗೌಡ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಸರಕಾರ ಈ ಕೂಡಲೇ ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಮಾಡಬೇಕು. ಅದಕ್ಕಾಗಿ ನುರಿತ ತಜ್ಞರ ಸಲಹೆಗಳನ್ನು ಪಡೆಯಬೇಕಿದೆ. ಈ ನಿಟ್ಟಿನಲ್ಲಿ ನಾಡಿನಾದ್ಯಂತ ದುಂಡು ಮೇಜಿನ ಸಭೆಯನ್ನು ಕೈಗೊಳ್ಳಬೇಕಿದ್ದು, ಇದಕ್ಕೆ ವಿದ್ಯಾರ್ಥಿಗಳ ಬೆಂಬಲವಿರಬೇಕಿದೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಮಾದರಿ ಶಿಕ್ಷಣ ನೀತಿ ರೂಪಿಸಲು ಸರಕಾರಕ್ಕೆ ಒತ್ತಾಯಿಸಬೇಕು. ಈ ಕೂಡಲೇ ತಜ್ಞರು ಸಮಿತಿಯನ್ನೂ ರಚಿಸಬೇಕು. ತಜ್ಞರಿಗೆ ಕರ್ನಾಟಕದ ನೆಲ, ಜಲ, ಭಾಷೆ, ಸಂಸ್ಕ್ರತಿಯ ತಿಳುವಳಿಕೆ ಇರಬೇಕು ಸಭೆಯಲ್ಲಿ ನಿರ್ಧರಿಸಲಾಯಿತು.

ಸಂಘಟನೆಯು ರಾಜ್ಯ ಶಿಕ್ಷಣ ರೂಪಿಸಲು ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ದುಂಡು ಸಮಾವೇಶ ಆಯೋಜಿಸಿ, ಜನಾಭಿಪ್ರಾಯ ಸಂಗ್ರಹಿಸಬೇಕು. ಜನಾಭಿಪ್ರಾಯ ಸಂಗ್ರಹದ ನಂತರ ಕರುಡು ವರದಿಯನ್ನು ರಚಿಸಿ ನಾಡಿನ ವಿದ್ಯಾರ್ಥಿ, ಪೋಷಕರು, ಶಿಕ್ಷಕರು, ಸಾಹಿತಿಗಳು, ಶಿಕ್ಷಣ ತಜ್ಞರುಗಳ ನೇತೃತ್ವದಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ವೈದ್ಯೆ ಹಾಗೂ ಲೇಖಕಿ ಡಾ.ವಸುಂದರ ಭೂಪತಿ, ವಕೀಲೆ ಅಖಿಲ ವಿದ್ಯಾಸಂದ್ರ, ಎಐಎಸ್‍ಎಫ್ ರಾಜ್ಯ ಕಾರ್ಯದರ್ಶಿ ವೀಣಾ ನಾಯ್ಕ್ ಸೇರಿದಂತೆ ಶಿಕ್ಷಣ ತಜ್ಞರು, ಚಿಂತಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News