ಬುಡಕಟ್ಟು ಸಮುದಾಯಗಳ ಸ್ಥಿತಿಗತಿ ಕುರಿತು ಚರ್ಚೆ : ಬೃಂದಾ ಕಾರಟ್ ನೇತೃತ್ವದ ನಿಯೋಗದಿಂದ ಮುಖ್ಯಮಂತ್ರಿ ಭೇಟಿ

ಬೆಂಗಳೂರು : ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯೆ ಹಾಗೂ ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್ ನ ಉಪಾಧ್ಯಕ್ಷೆ ಬೃಂದಾ ಕಾರಟ್ ನೇತೃತ್ವದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನಿಯೋಗವು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸರಕಾರಿ ನಿವಾಸ ಕಾವೇರಿಯಲ್ಲಿ ಭೇಟಿಯಾಗಿ ರಾಜ್ಯದಲ್ಲಿರುವ ನಾನಾ ಬುಡಕಟ್ಟು ಸಮುದಾಯಗಳ ಸ್ಥಿತಿ ಗತಿ ಕುರಿತಂತೆ ಚರ್ಚಿಸಿ ಮನವಿ ಪತ್ರ ಸಲ್ಲಿಸಿತು.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಾಸವಿರುವ ಆದಿವಾಸಿ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಆದಿಮ ಸೂಕ್ಷ್ಮ ಬುಡಕಟ್ಟು ಗುಂಪಿಗೆ ಸೇರಿರುವ ಹಲವಾರು ಸಮುದಾಯಗಳು ಅಳಿವಿನಂಚಿನಲ್ಲಿವೆ. ಈ ಸಮುದಾಯದ ಜನರು ಜೀವನಾಧಾರದ ಅಭದ್ರತೆಯಿಂದಾಗಿ ಅಪೌಷ್ಠಿಕತೆಗೆ, ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಸಮುದಾಯಗಳನ್ನು ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಸರಕಾರ ಅವರನ್ನು ತಲುಪಲು ಸಾಧ್ಯವಾಗಬೇಕು ಎಂದು ನಿಯೋಗ ಮನವಿ ಮಾಡಿತು.
ಕೊರಗ ಸಮುದಾಯದ ಬೇಡಿಕೆಗಳು: ಅಧ್ಯಯನ ನಡೆಯಲಿ-ಅಳಿವಿನಂಚಿನಲ್ಲಿರುವ ಕೊರಗ ಸಮುದಾಯದ ಅಧ್ಯಯನ ನಡೆಸಿ ಪರಿಹಾರ ಕಂಡುಕೊಂಡು ಸಮುದಾಯ ಉಳಿಸುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸುವುದು ಅಗತ್ಯವಾಗಿದೆ. ಸಮುದಾಯದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕಳೆದ 2011ರ ಜನಗಣತಿ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 12 ಸಾವಿರ ಇರುವ ಜನಸಂಖ್ಯೆ ಇಂದು 8 ಸಾವಿರವಾಗಿದೆ. ಆದುದರಿಂದ, ಈ ಸಮುದಾಯ ಬದುಕಿನ ಪರಿಸ್ಥಿತಿಯ ಕುರಿತು ಅಧ್ಯಯನ ಕೈಗೊಂಡು ಪರಿಹಾರ ಕಂಡುಕೊಂಡು ಜಾರಿಗೆ ತರಬೇಕು.
ಕೊರಗರ ಆರೋಗ್ಯದ ಬಜೆಟ್ ಬಿಡುಗಡೆ ಮಾಡುವುದು: ಕೊರಗ ಸಮುದಾಯ ಪಿವಿಟಿಜಿ ಬುಡಕಟ್ಟು ಸಮುದಾಯವಾಗಿದ್ದು, ಈ ಸಮುದಾಯ ಅಸ್ಪೃಶ್ಯತೆ ಕಾರಣದಿಂದ ಇಂದು ಹಲವಾರು ಗಂಭೀರ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪುವ ಪ್ರಕರಣ ಹೆಚ್ಚಾಗಿದೆ. ಕೊರಗ ಸಮುದಾಯಕ್ಕೆ ಗುಣಮಟ್ಟದ ಆರೋಗ್ಯ ಸೌಲಭ್ಯ ಒದಗಿಸಲು ಈ ಹಿಂದೆ ಸರಕಾರ ಪ್ರತಿ ವರ್ಷ ವಿಶೇಷವಾಗಿ ಆರೋಗ್ಯದ ಅನುದಾನ ನೀಡಿದೆ ಎಂದು ನಿಯೋಗ ಗಮನ ಸೆಳೆಯಿತು.
ಆದರೆ, ಕಳೆದ ಎರಡು ವರ್ಷಗಳಿಂದ ಕೊರಗ ಸಮುದಾಯಕ್ಕೆ ನೀಡಬೇಕಾದ ಅನುದಾನ ಬಿಡುಗಡೆ ಆಗದೆ ಜಿಲ್ಲೆಯ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ ಸಾಲದ ಮೂಲಕ ಖಾಸಗಿ ಆಸ್ಪತ್ರೆಯಲ್ಲಿ ಕೊರಗರಿಗೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಇದೆ. ಆದುದರಿಂದ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯಕ್ಕೆ ಈ ಹಿಂದಿನಂತೆ ಆರೋಗ್ಯದ ಅನುದಾನ ನೀಡಬೇಕು ಎಂದು ನಿಯೋಗ ಮನವಿ ಮಾಡಿತು.
ಇತ್ತೀಚೆಗೆ ಈ ಪ್ರದೇಶದಲ್ಲಿನ ಕೊರಗ ಸಮುದಾಯದ ಮೂಲಭೂತ ಪ್ರಶ್ನೆಗಳ ಕುರಿತು ಬೃಹತ್ ರ್ಯಾಲಿಯನ್ನು ನಡೆಸುವ ಮೂಲಕ ವಿವರವಾದ ಮನವಿಯನ್ನು ಸಲ್ಲಿಸಲಾಗಿದ್ದು, ಈ ಕುರಿತು ಎಲ್ಲ ಪ್ರಶ್ನೆಗಳನ್ನು ಇತ್ಯರ್ಥ ಪಡಿಸಲು ಆಡಳಿತಾತ್ಮಕ ಮಟ್ಟದಲ್ಲಿ ಕ್ರಮ ವಹಿಸಬೇಕು ಎಂದು ನಿಯೋಗ ಕೋರಿತು.
ಬಲಾಢ್ಯರಿಂದ ರಕ್ಷಣೆ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಡ ಗ್ರಾಮದ ಪಡುಕೋಣೆ ಕೊರಗ ಸಮುದಾಯ ಕುಟುಂಬಕ್ಕೆ ಸೇರಿದ ಅವರ ಭೂಮಿಯನ್ನು ಬಲಾಢ್ಯರಿಂದ ರಕ್ಷಣೆ ಮಾಡಿಕೊಡಬೇಕು ಎಂದು ನಿಯೋಗ ಮನವಿ ಸಲ್ಲಿಸಿತು.
ಹಸಲರು ಸಮುದಾಯದ ಬೇಡಿಕೆಗಳು: ಹಾಸನ ಜಿಲ್ಲೆಯ ಹಸಲರು ಸಮುದಾಯಕ್ಕೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಸಲರು ಸಮುದಾಯಕ್ಕೆ ನೀಡುತ್ತಿರುವ ಉಚಿತ ಪೌಷ್ಠಿಕ ಆಹಾರ ಯೋಜನೆ ವಿಸ್ತರಣೆ ಮಾಡಿ ಇವರಿಗೂ ವಿತರಿಸಲು ಕ್ರಮ ವಹಿಸಬೇಕು. ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕಿನ ಅರಣ್ಯ ಭೂಮಿಯಲ್ಲಿ ವಾಸವಾಗಿರುವ ಹಸಲರು ಸಮುದಾಯಕ್ಕೆ ವಸತಿ ನಿಗಮ ಮತ್ತು ಪರಿಶಿಷ್ಟ ಕಲ್ಯಾಣ ಇಲಾಖೆಯ ಮೂಲಕ ವಸತಿ ಸೌಲಭ್ಯ ಒದಗಿಸಬೇಕು.
ಅರಣ್ಯ ಪ್ರದೇಶದಲ್ಲಿ ವಾಸಿಸುವ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಹಕ್ಕು ಪತ್ರ ನೀಡುವುದು, ನಿವೇಶನ ರಹಿತರಿಗೆ ನಿವೇಶನ ನೀಡುವುದು, ಕಾಫಿ ತೋಟದಲ್ಲಿ ದುಡಿಯುವ ಆದಿವಾಸಿಗಳಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಅಡಿಕೆ ತೋಟದಲ್ಲಿ ಅಪಾಯಕಾರಿ ಕೆಲಸ ಮಾಡುವ ಶಿವಮೊಗ್ಗ ಜಿಲ್ಲೆಯ ಹಸಲರು ಜನಾಂಗದ ಕುಟುಂಬಕ್ಕೆ ಆರೋಗ್ಯ, ಜೀವನ ಭದ್ರತೆ ಒದಗಿಸಬೇಕು.
ಕೊಡಗು ಜಿಲ್ಲೆಯಲ್ಲಿ ಆದಿವಾಸಿ ಸಮುದಾಯಗಳು ಭೂಮಿ ಇಲ್ಲದೇ, ಅರಣ್ಯ ಹಕ್ಕುಗಳ ಕಾಯ್ದೆಯನ್ವಯ ಭೂಮಿ ಮತ್ತು ಸಮುದಾಯ ಹಕ್ಕುಗಳನ್ನು ಪಡೆಯಲಾಗುತ್ತಿಲ್ಲ. ವಸತಿ ನಿವೇಶನ ಇಲ್ಲದ ಮನೆ ಇಲ್ಲದ, ನಿರ್ವಸತಿ ಕುಟುಂಬಗಳು ಇದ್ದು, ಆ ಪ್ರಶ್ನೆಗಳನ್ನು ಇತ್ಯರ್ಥ ಪಡಿಸಬೇಕು. ಈಗಾಗಲೇ ನಡೆದಿರುವ ಸಮೀಕ್ಷೆಯಂತೆ ಪರಿಹಾರತ್ಮಾಕ ಕ್ರಮ ವಹಿಸಬೇಕು. ಪೊನ್ನಂಪೇಟೆ, ಹೈಸೊಡ್ಲೂರು ಮೂಲಭೂತ ಸೌಕರ್ಯಗಳಿಗಾಗಿ, ಸರಕಾರಿ ಜಾಗವನ್ನು ಉಳ್ಳವರಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಹೊರಟಿರುವ ಯೋಜನೆಯನ್ನು ಕೈ ಬಿಡಲು ಆಗ್ರಹಿಸಿ ನಡೆದಿರುವ ಹೋರಾಟದ ಬೇಡಿಕೆಗಳನ್ನು ಈಡೇರಿಸಬೇಕು.
ಈಗ ಜಾರಿಯಲ್ಲಿರುವ ಟಿಎಸ್‍ಪಿ ಮತ್ತು ಎಸ್‍ಸಿಪಿ ಯೋಜನೆಯ ಅನುಷ್ಠಾನದ ಅನುಭವಗಳ ಕ್ರೋಢೀಕರಣಕ್ಕಾಗಿ ಒಂದು ವೈಜ್ಞಾನಿಕ ಅಧ್ಯಯನದ ವ್ಯವಸ್ಥೆ ಮಾಡಬೇಕು. ಆದಿವಾಸಿ ಸಮುದಾಯಗಳ ಎಲ್ಲಾ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಪ್ರತಿ ಜಿಲ್ಲೆಯಲ್ಲಿ ‘ಆದಿವಾಸಿ ಅದಾಲತ್’ ಅನ್ನು ನಡೆಸಬೇಕೆಂದು ಮತ್ತು ತಮ್ಮ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಒಂದು ವಿಶಾಲವಾದ ಸಭೆಯನ್ನು ಕರೆಯಬೇಕು ಎಂದು ಮುಖ್ಯಮಂತ್ರಿಗೆ ನಿಯೋಗ ಮನವಿ ಮಾಡಿತು.
ನಿಯೋಗದಲ್ಲಿ ತ್ರಿಪುರ ರಾಜ್ಯದ ವಿರೋಧ ಪಕ್ಷದ ಮುಖಂಡ ಜಿತೇಂದ್ರ ಚೌಧುರಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ.ಎಸ್.ವೈ.ಗುರುಶಾಂತ್, ಶ್ರೀಧರ್ ನಾಡ, ಡಾ.ಕೃಷ್ಣಪ್ಪ ಕೊಂಚಾಡಿ, ಜೆ.ಆರ್.ಪ್ರೇಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.