ಮುಸ್ಲಿಮರಿಗೆ ಮೀಸಲಾತಿ ವಿರುದ್ಧ ಬಿಜೆಪಿ ಹೋರಾಟ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಇದನ್ನು ನಾವು ವಿರೋಧಿಸುತ್ತೇವೆ. ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಿದ್ದೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ರವಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮುಸ್ಲಿಂ ಬಂಧುಗಳಿಗೆ ಶೇ.4ರಷ್ಟು ಮೀಸಲಾತಿ ಹಿಂದೆ ಇತ್ತು. ಧಾರ್ಮಿಕ ಮೀಸಲಾತಿ ಕೊಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಧಾರ್ಮಿಕ ಮೀಸಲಾತಿ ನೀಡಿದರೆ ಅದು ಸಂವಿಧಾನಕ್ಕೆ ವಿರುದ್ಧವಾದ ನಡೆ ಎಂದು ಪ್ರತಿಪಾದಿಸಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಧಾರ್ಮಿಕ ಮೀಸಲಾತಿಯನ್ನು ಹಿಂದಕ್ಕೆ ಪಡೆಯಲಾಗಿತ್ತು. ಕಾಂಗ್ರೆಸ್ಸಿನವರು ತಾವು ಅಧಿಕಾರಕ್ಕೆ ಬಂದರೆ ಮತ್ತೆ ಧಾರ್ಮಿಕ ಮೀಸಲಾತಿ ನೀಡುವುದಾಗಿ ಘೋಷಿಸಿದ್ದರು. ಈಗ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಕೊಟ್ಟಿದ್ದಾರೆ. ಇದು ಕಾನೂನುಬಾಹಿರ, ಸಂವಿಧಾನವಿರೋಧಿ ಎಂದು ಅವರು ಆಕ್ಷೇಪಿಸಿದರು.