ಗಂಡಾನೆಗಳ ನಡುವೆ ಕಾಳಗ; ಒಂದು ಆನೆ ಸಾವು

Update: 2023-09-07 07:16 GMT

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಜಾಗೇರಿ ಗ್ರಾಮದ ದೊಡ್ಡ ಮಾಕಳಿ ಅರಣ್ಯ ಪ್ರದೇಶದಲ್ಲಿ ಎರಡು ಗಂಡಾನೆಗಳ ನಡುವೆ ನಡೆದ ಕಾಳಗದಲ್ಲಿ ಒಂದು ಆನೆ ಮೃತಪಟ್ಟಿದೆ.

ಮೃತಪಟ್ಟ ಆನೆಗೆ 18ರಿಂದ 20 ವರ್ಷವಾಗಿದ್ದು, ಎರಡು ದಿನಗಳ ಹಿಂದೆ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಎರಡು ಮೂರು ದಿನಗಳ ಹಿಂದೆ ಆನೆಗಳ ಕೂಗಾಟ ಹೆಚ್ಚಾಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

‘ಮೃತಪಟ್ಟ ಆನೆಯ ಹೊಟ್ಟೆ ಮತ್ತು ಕತ್ತಿನ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಇನ್ನೊಂದು ಆನೆಯು ದಂತದಿಂದ ತಿವಿದಿದೆ. ಆನೆಯು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ’ ಎಂದು ಪಶುವೈದ್ಯ ಶಿವಕುಮಾರ್ ತಿಳಿಸಿದ್ದಾರೆ.

ದೊಡ್ಡಮಾಕಳಿ ಅರಣ್ಯ ಪ್ರದೇಶದ ಸಿಬ್ಬಂದಿ ಬುಧವಾರ ಬೀಟ್‌ಗೆ ಹೋಗಿದ್ದ ಸಂದರ್ಭದಲ್ಲಿ ಆನೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಂತೋಷ್ ಕುಮಾರ್, ಎಸಿಎಫ್ ಶಶಿಧರ್, ಆರ್‌ಎಫ್‌ಒ ಭರತ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿನೆ ನಡೆಸಿದರು. ಆನೆಯ ದಂತವನ್ನು ತೆಗೆದು, ಮರಣೋತ್ತರ ಪರೀಕ್ಷೆ ನಡೆಸಿ, ನಿಯಮಾನುಸಾರ ಕಳೇಬರವನ್ನು ವಿಲೇವಾರಿ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News