ಡಿ.ಕೆ.ಶಿವಕುಮಾರ್ ಹೆಸರಲ್ಲಿ ನಕಲಿ ಲೆಟರ್ ಹೆಡ್; ಫಾಕ್ಸ್ ಕಾನ್‌‌ ಸಂಸ್ಥೆಗೆ ಬರೆದ ಪತ್ರ ವೈರಲ್: ಎಫ್​ಐಆರ್ ದಾಖಲು

Update: 2023-11-04 16:20 GMT

ಬೆಂಗಳೂರು, ನ.4: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ನಕಲಿ ಪತ್ರ ಇಟ್ಟುಕೊಂಡು ಸುದ್ದಿಗೋಷ್ಠಿ ಮಾಡುವಷ್ಟು ಹೀನಾಯ ಸ್ಥಿತಿಗೆ ತಲುಪಿದ್ದು, ಈ ಮೂಲಕ ಮುಂಬರುವ ತೆಲಂಗಾಣ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ತಮ್ಮ ಹೆಸರಿನಲ್ಲಿ ಆ್ಯಪಲ್ ಏರ್ಪಾಡ್ ಉತ್ಪಾದನಾ ಘಟಕ ಸ್ಥಳಾಂತರ ವಿಚಾರವಾಗಿ ಫಾಕ್ಸ ಕಾನ್ ಸಂಸ್ಥೆಗೆ ಬರೆದಿರುವಂತೆ ಸೃಷ್ಟಿಸಲಾದ ನಕಲಿ ಪತ್ರ ಇಟ್ಟುಕೊಂಡು ತೆಲಂಗಾಣ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ನಡೆಸಿರುವ ವಿಚಾರವಾಗಿ ಶನಿವಾರ ನಗರದ ಕುಮಾರಕೃಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಲೆಟರ್ ಹೆಡ್ ವಿನ್ಯಾಸ, ಬಣ್ಣ ಬೇರೆ ಇದೆ. ನನ್ನ ಲೆಟರ್ ಹೆಡ್ ಪ್ರತಿ ಪುಟಕ್ಕೆ ಸಂಖ್ಯೆಗಳಿರುತ್ತವೆ. ನನ್ನ ಲೆಟರ್ ಹೆಡ್ ಹಸಿರು ಬಣ್ಣದಲ್ಲಿ ಇಲ್ಲ. 15 ವರ್ಷಗಳ ಹಿಂದೆ ಶಾಸಕರುಗಳು ಹಸಿರು ಬಣ್ಣದ ಲೆಟರ್ ಹೆಡ್ ಬಳಸುತ್ತಿದ್ದರು. ಈಗ ಆ ಬಣ್ಣದ ಲೆಟರ್ ಹೆಡ್ ಅನ್ನು ಯಾರೂ ಬಳಸುವುದಿಲ್ಲ ಎಂದರು.

ನಮ್ಮ ಸರಕಾರ ಅನೇಕ ಬಂಡವಾಳ ಹೂಡಿಕೆದಾರರ ಜತೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಈಗಷ್ಟೇ ಟೊಯೋಟಾ ಕಂಪೆನಿ ಜೊತೆ ಮಾತನಾಡಿದ್ದು, ಅವರು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ವಿಸ್ತರಣೆ ಮಾಡಲಿದ್ದಾರೆ. ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಎಂ.ಬಿ.ಪಾಟೀಲ್ ಅವರು ಅಮೆರಿಕಕ್ಕೆ ತೆರಳಿ ಬಂಡವಾಳ ಹೂಡಿಕೆದಾರರನ್ನು ಸಂಪರ್ಕಿಸಿದ್ದಾರೆ. ನಮ್ಮ ಸರಕಾರದ ಕಾರ್ಯವೈಖರಿ ಗಮನಿಸಿ ಅನೇಕ ಅಮೆರಿಕ ಕಂಪೆನಿಗಳು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ನನ್ನ ಎಲೆಕ್ಟ್ರಾನಿಕ್ ಸಹಿಯನ್ನು ದುರ್ಬಳಕೆ ಮಾಡಿಕೊಂಡು ನಕಲಿ ಪತ್ರ ತಯಾರಿಸಲಾಗಿದ್ದು, ಈ ವಿಚಾರವಾಗಿ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದೇವೆ. ಈ ರೀತಿ ನಕಲಿ ಪತ್ರ ಬಂದಿರುವುದು ದುರಾದೃಷ್ಟಕರ. ಈ ನಕಲಿ ಪತ್ರದ ಕುರಿತು ತನಿಖೆ ನಡೆಯಲಿದೆ ಎಂದರು. 

ವಿಧಾನಸೌಧ ಠಾಣೆಗೆ ದೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೆಟರ್‍ಹೆಡ್ ಮತ್ತು ಸಹಿಯನ್ನು ನಕಲು ಮಾಡಿ ಆಪಲ್ ಏರ್ಪಾಡ್ ಉತ್ಪಾದನಾ ಘಟಕವನ್ನು ಹೈದರಾಬಾದ್‍ನಿಂದ ಬೆಂಗಳೂರಿಗೆ ಸ್ಥಳಾಂತರಿಸುವಂತೆ ಫಾಕ್ಸ್ ಕಾನ್ ಸಂಸ್ಥೆಗೆ ಬರೆದಿರುವಂತೆ ಸೃಷ್ಟಿಸಲಾದ ನಕಲಿ ಪತ್ರ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಾಜಕೀಯ ದುರುದ್ದೇಶದಿಂದ ಅನಾಮಧೇಯ ವ್ಯಕ್ತಿಗಳು ಈ ರೀತಿ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕೆಂದು ಸರಕಾರದ ಕಾರ್ಯದರ್ಶಿ ಡಾ/ರಾಜೇಂದ್ರ ಪ್ರಸಾದ್ ಎಂ. ಎಂಬುವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‍ಐಆರ್ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News