ಸಂಕ್ರಾಂತಿ ನಂತರ ಸಾರಿಗೆ ನೌಕರರ ಸಮಸ್ಯೆಗೆ ಪರಿಹಾರ : ಸಚಿವ ರಾಮಲಿಂಗಾರೆಡ್ಡಿ

Update: 2024-12-29 17:00 GMT

ರಾಮಲಿಂಗಾರೆಡ್ಡಿ

ಬೆಂಗಳೂರು : ಸಂಕ್ರಾಂತಿ ಹಬ್ಬದ ನಂತರ ಸಾರಿಗೆ ನೌಕರರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ. ಸಾರಿಗೆ ಸಿಬ್ಬಂದಿಯ ಬೇಡಿಕೆಗಳ ವಿಚಾರದಲ್ಲಿ ನಮ್ಮ ಸರಕಾರ ಬದ್ಧವಾಗಿದೆ ಎಂದರು.

ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಸಮಾನ ವೇತನದ ಬಗ್ಗೆ ಉಲ್ಲೇಖಿಸಿದ್ದೇವು. ಈಗಾಗಲೇ ಇಲಾಖೆಗೆ ಸರಕಾರವು 220 ಕೋಟಿ ರೂ. ಬಿಡುಗಡೆ ಮಾಡಿದೆ. ಪಿ.ಎಫ್. ಹಣ ಸಂಬಂಧ 2 ಸಾವಿರ ಕೋಟಿ ರೂ. ಬಿಡುಗಡೆಗೆ ಮನವಿ ಸಲ್ಲಿಸಿದ್ದೇವೆ. ಸಂಪುಟದಲ್ಲಿ ವೇತನ ಪರಿಷ್ಕರಣೆ ಬಗ್ಗೆಯೂ ಮಾತನಾಡಿದ್ದೇವೆ. ನಮ್ಮ ಸರಕಾರ ಸಕರಾತ್ಮಕವಾಗಿದ್ದು, ನೌಕರರು ಒಪ್ಪುತ್ತಾರೆಂಬ ನಂಬಿಕೆ ಇದೆ. ಇದಲ್ಲದೇ ಬಸ್ ಟಿಕೆಟ್ ದರ ಹೆಚ್ಚಳ ಪ್ರಸ್ತಾವನೆ ಬಗ್ಗೆ ಪರಿಶೀಲಿಸಿ ಸರಕಾರ ತೀರ್ಮಾನಿಸಲಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಸಾವಿರಾರು ನೌಕರರನ್ನು ಅಮಾನತು ಮಾಡಲಾಗಿತ್ತು. ಆದರೆ, ನಾವು ಅಧಿಕಾರಕ್ಕೆ ಬಂದ ನಂತರ ಅವರನ್ನೆಲ್ಲಾ ಪುನಃ ನೇಮಿಸಿಕೊಂಡಿದ್ದೇವೆ. ಬಿಜೆಪಿ ಸರಕಾರ 900 ಕೋಟಿ ರೂ.ಸಾಲ ಬಿಟ್ಟು ಹೋಗಿದ್ದೇ ಸಮಸ್ಯೆಗೆ ಕಾರಣವಾಗಿದೆ. ಬಜೆಟ್‍ನಲ್ಲಿ ಸಾರಿಗೆ ಇಲಾಖೆಗೆ ಅನುದಾನ ನೀಡಬೇಕೆಂದು ಸಿಎಂ ಬಳಿ ಬೇಡಿಕೆ ಇಟ್ಟಿದ್ದೇನೆ. ಹೀಗಾಗಿ ಸಂಕ್ರಾಂತಿ ಹಬ್ಬದ ನಂತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News