ಆರೆಸ್ಸೆಸ್, ಮನುಸ್ಮೃತಿ ವಿರೋಧಿಸುವುದಕ್ಕೆ ಬಿಜೆಪಿಯವರು ನನ್ನನ್ನು ಗುರಿಯಾಗಿಸುತ್ತಿದ್ದಾರೆ : ಪ್ರಿಯಾಂಕ್ ಖರ್ಗೆ
ಬೆಂಗಳೂರು: ನಾನು ಆರೆಸ್ಸೆಸ್ ಮತ್ತು ಮನುಸ್ಮೃತಿಯ ವಿರುದ್ಧ ಇದ್ದೇನೆ ಮತ್ತು ನಾನು ಅದರ ಬಗ್ಗೆ ದನಿಯೆತ್ತಿದ್ದೇನೆ. ಅಲ್ಲದೆ, ನಾವು ಅಂಬೇಡ್ಕರ್ ಅವರ ಆದರ್ಶಗಳನ್ನು ಮತ್ತು ಸಂವಿಧಾನವನ್ನು ಅನುಸರಿಸುತ್ತೇವೆ. ಆದ್ದರಿಂದ ಬಿಜೆಪಿಯವರು ನನ್ನನ್ನು ಗುರಿಯಾಗಿಸುತ್ತಿದ್ದಾರೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ದೂರಿದ್ದಾರೆ.
ಮಂಗಳವಾರ ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೇದಾರ ಸಚಿನ್ ಆತ್ಮಹತ್ಯೆಯು ಸರಕಾರಕ್ಕೂ ಮತ್ತು ನನಗೂ ಹೇಗೆ ಸಂಬಂಧಿಸಿದೆ ಎಂಬುದನ್ನು ಜನರ ಮುಂದಿಡುವಲ್ಲಿ ಬಿಜೆಪಿಯವರಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಈ ವಿಚಾರದ ಮೂಲಕ ಅವರು ತಮ್ಮ ನಾಯಕತ್ವವನ್ನು ಸ್ಥಾಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದರು.
ಗುತ್ತಿಗೇದಾರ ಸಚಿನ್ ಆತ್ಮಹತ್ಯೆಗೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಸಂಬಂಧವಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಬಿಜೆಪಿ ಈಗ ಒಂದು ಬಣ ಪ್ರೇರಿತ ಪಕ್ಷವಾಗಿದೆ. ಕರ್ನಾಟಕದಲ್ಲಿ ನಾಯಕತ್ವದ ಕಿತ್ತಾಟ ನಡೆಯುತ್ತಲೇ ಇದೆ. ಅವರು ಎಂದಿನಂತೆ ಈ ಸಾವನ್ನು ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ದೂರಿದರು.
ನಾನು ಬಿಜೆಪಿಯವರ ಸಿದ್ಧಾಂತಕ್ಕೆ ವಿರುದ್ಧವಾಗಿದ್ದೇನೆ. ಅವರು ಸಹಜವಾಗಿ ಇಂತಹ ವಿಚಾರಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಾರೆ. ಸಂತ್ರಸ್ತರಲ್ಲಿ ಯಾರಿಗಾದರೂ ನ್ಯಾಯ ದೊರಕಿಸಿಕೊಡಲು ಬಿಜೆಪಿಗೆ ನಿಜವಾಗಿಯೂ ಆಸಕ್ತಿ ಇದ್ದರೆ, ಮೊದಲು ಬಿ.ವೈ.ವಿಜಯೇಂದ್ರ ತನ್ನ ತಂದೆಯ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ತಾವು ರಾಜೀನಾಮೆ ನೀಡಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.