ಬಡವರಿಗೆ ನಿರ್ಮಿಸುವ ಮನೆಗಳಿಗೆ ಶೇ.18ರಷ್ಟು ಜಿಎಸ್‍ಟಿ ರದ್ದತಿ ಕೋರಿ ಪ್ರಧಾನಿ ಭೇಟಿ: ಟಿ.ಬಿ.ಜಯಚಂದ್ರ
ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಯೋಜನೆಗಳಡಿ ಬಡವರಿಗೆ ನಿರ್ಮಿಸುವ ಮನೆಗಳಿಗೆ ಶೇ.18ರಷ್ಟು ಜಿಎಸ್‍ಟಿ ತೆರಿಗೆ ವಿಧಿಸುತ್ತಿರುವುದನ್ನು ರದ್ದುಗೊಳಿಸುವಂತೆ ಕೋರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಶೀಘ್ರವೇ ಭೇಟಿ ಮಾಡಲಾಗುವುದು ಎಂದು ರಾಜ್ಯ ಸರಕಾರದ ದಿಲ್ಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಸ್ತಾವನೆಗಳ ಕುರಿತು ವಿಧಾನಸೌಧದಲ್ಲಿ ನಿನ್ನೆ ನಡೆದ ಸಭೆಯಲ್ಲಿ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಈ ಮನವಿ ಸಲ್ಲಿಸಿದರು ಎಂದರು.
ಜಿ.ಎಸ್.ಟಿ.ಯಿಂದಾಗಿ ಮನೆ ನಿರ್ಮಾಣಕ್ಕೆ ಫಲಾನುಭವಿಗಳು ತಲಾ ಒಂದೂವರೆ ಲಕ್ಷ ರೂಪಾಯಿ ಪಾವತಿಸಬೇಕಾಗುತ್ತಿದೆ. ಇದು ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಹೊರೆಯಾಗಿ ಪರಿಣಮಿಸಿದೆ. ಆದುದರಿಂದ, ಜಿ.ಎಸ್.ಟಿ ರದ್ದುಗೊಳಿಸಬೇಕಾದ ತುರ್ತು ಅಗತ್ಯವಿರುವುದನ್ನು ಝಮೀರ್ ಅಹ್ಮದ್ ಸಭೆಯಲ್ಲಿ ವಿವರಿಸಿದರು. ಈ ಬಗ್ಗೆ ಪ್ರಧಾನಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಇಡೀ ದೇಶದ ಬಡ ಜನತೆಗೆ ಅನುಕೂಲವಾಗುವಂತಹ ನಿರ್ಧಾರ ತೆಗೆದುಕೊಳ್ಳುವಂತೆ ಮನವರಿಕೆ ಮಾಡಿಕೊಡಲಾಗುವುದು ಎಂದು ಜಯಚಂದ್ರ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 2865 ಕೊಳೆಗೇರಿಗಳಿದ್ದು, ಆ ಪೈಕಿ 635 ಕೊಳಗೇರಿಗಳು ಬೆಂಗಳೂರಿನಲ್ಲಿ ಇವೆ. ಕೊಳೆಗೇರಿಗಳ ಅಭಿವೃದ್ಧಿಗೆ ಕೇಂದ್ರ ಸರಕಾರಕ್ಕೆ 3,682 ಕೋಟಿ ರೂ. ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಈ ಬಗ್ಗೆ ಕೇಂದ್ರ ವಸತಿ ಹಾಗೂ ಕೊಳೆಗೇರಿ ಮಂಡಳಿ ಸಚಿವರ ಗಮನ ಸೆಳೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದಲ್ಲಿ 45,124 ಮನೆ ನಿರ್ಮಿಸುವ ಗುರಿಯಿದ್ದು, ಇದರಲ್ಲಿ 8287 ಮನೆಗಳ ನಿರ್ಮಾಣ ಮುಗಿದಿದೆ. ಇನ್ನು, 31,626 ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಈ ಯೋಜನೆಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಸಂಪರ್ಕ ವಿದ್ಯುತ್ ಸಂಪರ್ಕ, ಒಳಚರಂಡಿ ಹಾಗೂ ಎಸ್.ಟಿ.ಪಿ. ಒದಗಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ, ನಿರ್ಮಾಣಗೊಂಡಿರುವ ಮನೆಗಳಿಗೆ ಫಲಾನುಭವಿಗಳು ಹೋಗುತ್ತಿಲ್ಲ ಎಂದು ಜಯಚಂದ್ರ ತಿಳಿಸಿದರು.
ಈ ಯೋಜನೆಗೆ ವಿಶೇಷವಾಗಿ ಈ ಮೇಲ್ಕಂಡ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೇಂದ್ರ ಸರಕಾರ 660 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದು ಕೇಂದ್ರ ಸರಕಾರದಿಂದ ಬಿಡುಗಡೆಯಾಗುವಂತೆ ಗಮನಹರಿಸಬೇಕಿದೆ ಎಂದು ಅವರು ಹೇಳಿದರು.
ರಾಜ್ಯದೆಲ್ಲೆಡೆ ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿಗೆ ಜಿಲ್ಲಾ ಹಾಗೂ ತಾಲ್ಲೂಕು ವಾರು 171 ಹೊಸ ಪ್ರಸ್ತಾವನೆಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕಾಗಿ 60:40 ಹಂಚಿಕೆ ಸೂತ್ರದಲ್ಲಿ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿದರೆ ಅಲ್ಪಸಂಖ್ಯಾತರ ಕಾಲನಿಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಝಮೀರ್ ಅಹ್ಮದ್ ತಿಳಿಸಿದ್ದಾರೆ ಎಂದು ಜಯಚಂದ್ರ ತಿಳಿಸಿದರು.
ಕೇಂದ್ರ ನಗರಾಭಿವೃದ್ಧಿ, ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಸಚಿವರುಗಳನ್ನು ಭೇಟಿ ಮಾಡಿ ರಾಜ್ಯದ ಪ್ರಸ್ತಾವನೆಗಳಿಗೆ ಅನುಮತಿ ದೊರಕಿಸುವ ನಿಟ್ಟಿನಲ್ಲಿ ಆದ್ಯತೆ ಮೇಲೆ ಕ್ರಮ ವಹಿಸುವುದಾಗಿ ಜಯಚಂದ್ರ ಭರವಸೆ ನೀಡಿದರು.