ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದು ಪಾರದರ್ಶಕ ತನಿಖೆ ನಡೆಸಬೇಕು : ವಿಜಯೇಂದ್ರ

Update: 2024-12-29 14:59 GMT

ಬೆಂಗಳೂರು : ‘ವಿಪಕ್ಷದಲ್ಲಿದಾಗ ಇಂತಹದ್ದೇ ಪ್ರಕರಣಗಳಲ್ಲಿ ಅಧಿಕಾರದಲ್ಲಿದ್ದವರ ರಾಜೀನಾಮೆಗೆ ಆರ್ಭಟಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ತಮ್ಮದೇ ಸರಕಾರದ ಅವಧಿಯಲ್ಲಿ ನಡೆದಿರುವ ಘಟನೆಯ ಹಿನ್ನಲೆಯಲ್ಲಿ ಈ ಕೂಡಲೇ ಕಮಿಷನ್ ವಸೂಲಿಗಾರರನ್ನು ಜೊತೆಗಿಟ್ಟುಕೊಂಡು ಒಬ್ಬ ಅಮಾಯಕ ಗುತ್ತಿಗೆದಾರನ ಆತ್ಮಹತ್ಯೆಗೆ ಕಾರಣರಾಗಿರುವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದು ತನಿಖೆಯು ಪಾರದರ್ಶಕವಾಗಿ ನಡೆಯಲು ಅವಕಾಶ ಮಾಡಿಕೊಡಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ.

ರವಿವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸಚಿವ ಪ್ರಿಯಾಂಕ್ ಖರ್ಗೆ ಅವರ ದುಷ್ಟಕೂಟದ ಸದಸ್ಯರ ಕಿರುಕುಳ, ಬೆದರಿಕೆಗಳನ್ನು ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿರುವ ಅಮಾಯಕ ಗುತ್ತಿಗೆದಾರ ಸಚಿನ್ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಾಯಿತು. ಅಕ್ಷರಶಃ ಸಚಿನ್ ಸಾವಿನಿಂದ ದಿಗ್ಮೂಢ ಸ್ಥಿತಿಯಲ್ಲಿರುವ ಕುಟುಂಬದ ಸ್ಥಿತಿ ಮಾನವೀಯತೆ ಇರುವ ಎಂತಹವರ ಅಂತಃಕರಣವನ್ನೂ ಕಲಕುತ್ತದೆ’ ಎಂದು ಹೇಳಿದ್ದಾರೆ.

‘ಅನಾಥ ಪ್ರಜ್ಞೆ ಎದುರಿಸುತ್ತಿರುವ ಮೃತರ ಆಶ್ರಯಿಸಿದ್ದ ಕುಟುಂಬ ಸದಸ್ಯರ ಆಕ್ರಂದನದ ಶಾಪ ಕಾಂಗ್ರೆಸ್ ಸರಕಾರವನ್ನು ತಟ್ಟದೇ ಬಿಡದು, ದುಷ್ಕರ್ಮಿಗಳ ಗುಂಪನ್ನು ಪೋಷಿಸುತ್ತಿರುವ ಪ್ರಿಯಾಂಕ್ ಖರ್ಗೆ ಇದರ ಫಲ ಅನುಭವಿಸಲೇಬೇಕು. ಸಚಿನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಬಿಜೆಪಿಯ ಹೋರಾಟ ಕೊನೆಯಾಗದು, ನೊಂದ ಸಚಿನ್ ಕುಟುಂಬದೊಂದಿಗೆ ನಾವಿದ್ದೇವೆಂಬ ಅಭಯ ನೀಡಲಾಯಿತು ಎಂದು ಅವರು ತಿಳಿಸಿದ್ದಾರೆ.

‘ಹೇಳೋದು ಸಿದ್ದಾಂತ ಮಾಡೋದು ದುರಾಚಾರ’ ಊರಿಗೆಲ್ಲ ಉಪದೇಶ, ಸಿದ್ಧಾಂತ ಹೇಳುತ್ತಾ ತಾವು ಮಾತ್ರ ನೊಂದವರ ಧ್ವನಿಯಾಗಬಲ್ಲೆವು ಎಂಬ ರೀತಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ ನೈಜ ಮುಖವಾಡ ಈ ಘಟನೆಯಿಂದ ಕಳಚಿ ಬಿದ್ದಿದೆ’ ಎಂದು ವಿಜಯೇಂದ್ರ ಇದೇ ವೇಳೆ ಲೇವಡಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News