ಕಾನೂನು ಉಲ್ಲಂಘಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಡಿಜಿಪಿಗೆ ಸಿ.ಟಿ.ರವಿ ದೂರು
ಬೆಂಗಳೂರು : ಬೆಳಗಾವಿ ಸುವರ್ಣಸೌಧದ ವಿಧಾನ ಪರಿಷತ್‍ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನನ್ನನ್ನು ಅಕ್ರಮವಾಗಿ ಬಂಧನ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ನನ್ನ ಮೇಲೆ ದೌರ್ಜನ್ಯ ಎಸಗಲಾಗಿದ್ದು, ಬಂಧನದ ಸಂದರ್ಭದಲ್ಲಿ ಕಾನೂನು ಉಲ್ಲಂಘನೆ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಡಿಜಿಪಿ ಅಲೋಕ್ ಮೋಹನ್ ಅವರನ್ನು ಭೇಟಿ ಮಾಡಿ ದೂರು ನೀಡಿದ ಅವರು, ಬೆಳಗಾವಿಯಲ್ಲಿ ಪೊಲೀಸರು ನನ್ನನ್ನು ಅಕ್ರಮವಾಗಿ ಬಂಧಿಸಿ, ದೂರು ಕೊಟ್ಟ ಬಳಿಕವೂ ಎಫ್‍ಐಆರ್ ಹಾಕದೆ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಕೆಲವು ಪ್ರಭಾವಿ ವ್ಯಕ್ತಿಗಳ ನಿದರ್ಶನದಂತೆ ರಾತ್ರಿ ಇಡೀ ನಿರ್ಜನ ಪ್ರದೇಶಗಳಲ್ಲಿ ಸುತ್ತಾಡಿಸಿ, ಸಂಪೂರ್ಣವಾಗಿ ಕಾನೂನಿನ ಉಲ್ಲಂಘನೆ ಮಾಡಿದ್ದು, ಹಕ್ಕು ಚ್ಯುತಿ ಉಲ್ಲಂಘಿಸಿರುವ ಸಂಬಂಧಪಟ್ಟ ಪೊಲೀಸರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ದೂರಿನಲ್ಲೇನಿದೆ?
‘ವಿಧಾನಪರಿಷತ್ ಒಳಗೆ ಪೊಲೀಸರು ತಮ್ಮ ವ್ಯಾಪ್ತಿಯನ್ನು ಮೀರಿ ನಡೆದುಕೊಂಡಿದ್ದಾರೆ. ಪೊಲೀಸರು ಸುಪಾರಿ ಕೊಲೆಗಟುಗರ ರೀತಿಯಲ್ಲಿ ನನ್ನ ಜೊತೆಗೆ ನಡೆದುಕೊಂಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರು ನನ್ನ ಕೊಲೆ ಯತ್ನಕ್ಕೆ ಪ್ರಯತ್ನ ನಡೆಸಿದ್ದರು. ವಿಧಾನಪರಿಷತ್ ಸದಸ್ಯನಾದ ನನ್ನನ್ನು ನಕಲಿ ಎನ್‍ಕೌಂಟರ್ ಮೂಲಕ ಹತ್ಯೆ ಮಾಡುವ ರೀತಿಯಲ್ಲಿ ವರ್ತಿಸಿದ್ದಾರೆ. ದೇಶದ ಇತಿಹಾಸದಲ್ಲೇ ಇಂತಹ ಘಟನೆ ನಡೆದಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸಭಾಪತಿಗಳು ನನಗೆ ಕ್ಲೀನ್ ಚಿಟ್ ನೀಡಿದ್ದಾರೆ. ಅಲ್ಲದೆ ನನಗೆ ಸೂಕ್ತ ರಕ್ಷಣೆ ನೀಡಲು ಎಡಿಜಿಪಿಗೆ ಸೂಚಿಸಿದ್ದಾರೆ. ಆದರೆ,ಪೊಲೀಸರು ನಿಯಮ ಮೀರಿ ನಡೆದುಕೊಂಡಿದ್ದಾರೆ. ಇದು ಸಂಸದೀಯ ನಿಯಮಾವಳಿ, ಸಂವಿಧಾನ ಹಾಗೂ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.
ತನ್ನನ್ನು ಸುವರ್ಣಸೌಧದ ಆವರಣದಿಂದ ಅಪಹರಣ ಮಾಡಲಾಗಿತ್ತು. ಬೆಳಗಾವಿ ಪೊಲೀಸರು ಡಿಸಿಎಂ ಡಿ.ಕೆ.ಶಿವಕುಮಾರ್ ಅಣತಿಯಂತೆ ಹಾಗೂ ಅವರ ಬಾಡಿಗೆ ಗೂಂಡಾಗಳಂತೆ ನಡೆದುಕೊಳ್ಳುತ್ತಿದ್ದರು. ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅವರ ಕೈಕೆಳಗಿನ ಅಧಿಕಾರಿಗಳು ಎನ್‍ಕೌಂಟರ್ ಮೂಲಕ ನನ್ನನ್ನು ಮುಗಿಸಲು ಪ್ರಯತ್ನ ನಡೆಸಿದಂತಿತ್ತು. 17 ಗಂಟೆ ಅವಧಿಯಲ್ಲಿ 400 ಕಿ.ಮೀ. ಸುತ್ತಾಡಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಸಿ.ಟಿ ರವಿ ತಮ್ಮ ದೂರಿನಲ್ಲಿ ಡಿಜಿಪಿ ಅವರಿಗೆ ಮನವಿ ಮಾಡಿದ್ದಾರೆ.