ಆಸ್ಪತ್ರೆ ಆವರಣದಲ್ಲಿ ಜಾನುವಾರು ಸೇರಿ ಸಾಕುಪ್ರಾಣಿ ಪ್ರವೇಶಿಸದಂತೆ ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ
ಬೆಂಗಳೂರು : ಆಸ್ಪತ್ರೆಗಳ ಒಳ ಮತ್ತು ಹೊರ ಆವರಣದಲ್ಲಿ ಜಾನುವಾರು ಸೇರಿ ಸಾಕುಪ್ರಾಣಿ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಸ್ಪತ್ರೆಯ ಮುಖ್ಯಸ್ಥರಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಮಂಗಳವಾರ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಆಸ್ಪತ್ರೆಗಳ ಒಳ ಮತ್ತು ಹೊರ ಆವರಣಗಳಲ್ಲಿ ಬೀದಿ ನಾಯಿಗಳು ಪ್ರವೇಶ ಮಾಡಿ ಒಳರೋಗಿ, ಹೊರರೋಗಿ, ಗರ್ಭಿಣಿಯರು ಹಾಗೂ ತಾಯಿ-ಮಕ್ಕಳಿಗೆ ಅಪಾಯ ಉಂಟುಮಾಡುವ ಸಂಭವದ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ವರದಿಗಳು ಪ್ರಕಟವಾಗುತ್ತಿರುವುದನ್ನು ಗಮನಿಸಲಾಗಿದೆ ಎಂದು ಹೇಳಿದೆ.
ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಿದ ಸಾರ್ವಜನಿಕರಿಗೆ ದಿನನಿತ್ಯ ತುರ್ತು ವಿಭಾಗ, ಹೊರ ಹಾಗೂ ಒಳರೋಗಿಗಳ ವಿಭಾಗ, ಗರ್ಭಿಣಿಯರು, ತಾಯಂದಿರು, ಹಾಗೂ ಮಕ್ಕಳಿಗೆ ಪ್ರಸೂತಿ ವಿಭಾಗದಲ್ಲಿ ಅವಶ್ಯ ವೈದ್ಯಕೀಯ ಸೇವೆಯನ್ನು ನಿರಂತರ ಒದಗಿಸಲಾಗುತ್ತಿರುತ್ತದೆ. ಆದುದರಿಂದ ಆರೋಗ್ಯ ಸಂಸ್ಥೆಗಳು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಆಸ್ಪತ್ರೆಯಲ್ಲಿ ಸೋಂಕು ತಡೆಗಟ್ಟಲು ಹಾಗೂ ಸಾರ್ವಜನಿಕರಿಗೆ ಉಂಟಾಗಬಹುದಾದ ಸಂಭವನೀಯ ಅಪಾಯಗಳನ್ನು ತಡೆಗಟ್ಟಲು ಸಾರ್ವಜನಿಕ ಆರೋಗ್ಯ ಹಿತದೃಷ್ಠಿಯಿಂದ ಆರೋಗ್ಯ ಸಂಸ್ಥೆಗಳಿಗೆ ಯಾವುದೇ ತರಹದ ಜಾನುವಾರು ಹಾಗೂ ಸಾಕು ಪ್ರಾಣಿಗಳ ಪ್ರವೇಶವನ್ನು ನಿರ್ಬಂಧಿಸುವುದು ಅತ್ಯವಶ್ಯವಾಗಿದೆ ಎಂದು ತಿಳಿಸಿದೆ.
ಆಸ್ಪತ್ರೆಗಳ ವೈದ್ಯಕೀಯ ತ್ಯಾಜ್ಯ ಹಾಗೂ ಆಹಾರ ಪದಾರ್ಥಗಳ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಿಸದೇ ಇರುವುದು ಬೀದಿ ನಾಯಿಗಳು ಆಸ್ಪತ್ರೆಯ ಆವರಣವನ್ನು ಪ್ರವೇಶಿಸುತ್ತಿರುವುದಕ್ಕೆ ಪ್ರಮುಖ ಕಾರಣವಾಗಿರುತ್ತದೆ. ಈ ಬಗ್ಗೆ ಆರೋಗ್ಯ ಸಂಸ್ಥೆಗಳ ಆಡಳಿತ ಮುಖ್ಯಸ್ಥರು ಅಗತ್ಯ ಕ್ರಮವಹಿಸದೇ ನಿರ್ಲಕ್ಷ್ಯವಹಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆದುದರಿಂದ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಆರೋಗ್ಯ ಸಂಸ್ಥೆಗಳ ಒಳ ಹಾಗೂ ಹೊರ ಆವರಣದಲ್ಲಿ ಯಾವುದೇ ಜಾನುವಾರು ಹಾಗೂ ಸಾಕು ಪ್ರಾಣಿಗಳು ಪ್ರವೇಶಿಸದಂತೆ ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ಹೇಳಿದೆ.
ಈ ಸಂಬಂಧ ಆಗುವ ನಿರ್ಲಕ್ಷತೆಯನ್ನು ಕರ್ತವ್ಯ ಲೋಪ ಎಂದು ಪರಿಗಣಿಸಿ ಸಂಸ್ಥೆಯ ಮುಖ್ಯಸ್ಥರ ಮೇಲೆ ಶಿಸ್ತು ಕ್ರಮವನ್ನು ಜರುಗಿಸಲಾಗುವುದು. ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಯ ಮುಖ್ಯಸ್ಥರು ಈ ಸಂಬಂಧ ತೆಗೆದುಕೊಂಡಿರುವ ಮುಂಜಾಗೃತ ಕ್ರಮಗಳ ಬಗ್ಗೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮೂಲಕ ಒಂದು ವಾರದೊಳಗಾಗಿ ವರದಿ ಸಲ್ಲಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.