ಸುದೀರ್ಘ 15 ಗಂಟೆ ವಿಧಾನಸಭೆ ಕಲಾಪ, ರಾತ್ರಿ 1 ಗಂಟೆವರೆಗೂ ನಡೆದ ಅಧಿವೇಶನ
ಬೆಳಗಾವಿ : ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನ ಸೋಮವಾರ (ಡಿ.16) ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸೋಮವಾರ ಬೆಳಿಗ್ಗೆ 10 ಗಂಟೆಗೆ ಆರಂಭವಾದ ವಿಧಾನಸಭೆ ಕಲಾಪ ತಡರಾತ್ರಿಯವರೆಗೂ ನಡೆಯಿತು. ರಾತ್ರಿ 1 ಗಂಟೆ ಬಳಿಕವೂ ಅದು ಮುಂದುವರಿದಿತ್ತು. ಸುಮಾರು 15 ಗಂಟೆಗಳ ಕಾಲ ಕಲಾಪ ನಡೆದಿದೆ.
ಪ್ರಶ್ನೋತ್ತರ ಕಲಾಪ, ಗಮನ ಸೆಳೆಯುವ ಸೂಚನೆ, ವಿಧೇಯಕ ಮಂಡನೆ ಸೇರಿದಂತೆ ವಿವಿಧ ವಿಷಯಗಳ ಚೆರ್ಚೆ ನಡೆಯಿತು. ಮಧ್ಯರಾತ್ರಿಯವರೆಗೂ ನಡೆದ ಕಲಾಪದಲ್ಲಿ ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್, ಮೂವರು ಸಚಿವರು, 7 ಕಾಂಗ್ರೆಸ್ ಶಾಸಕರು, 4 ಜೆಡಿಎಸ್ ಶಾಸಕರು, ಓರ್ವ ಬಿಜೆಪಿ ಶಾಸಕ ಮತ್ತು 1 ಪಕ್ಷೇತರ ಶಾಸಕ ಹಾಜರಿದ್ದರು.
ಮೊದಲ ಬಾರಿಗೆ ಆಯ್ಕೆಯಾಗಿರುವ ಜೆಡಿಎಸ್ ಸದಸ್ಯೆ ಕರೆಮ್ಮ ಅವರು ಮಧ್ಯರಾತ್ರಿಯ ವರೆಗೂ ಕಲಾಪದಲ್ಲಿ ಭಾಗಿಯಾಗಿ ತಮ್ಮ ಗಮನ ಸೆಳೆಯುವ ಸೂಚನೆಗೆ ಸರಕಾರದಿಂದ ಉತ್ತರ ಪಡೆದರು.
ಮಧ್ಯರಾತ್ರಿ 12.55ರ ವರೆಗೆ ನಡೆಸಿ ವಿಧಾನ ಮಂಡಲ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಬಿಜೆಪಿ ಸದಸ್ಯರಾದ ಗುರುರಾಜ್ ಗಂಟಿಹೊಳೆ, ಬೈರತಿ ಬಸವರಾಜ್, ವಿ.ಸುನೀಲ್ ಕುಮಾರ್ ಸೇರಿದಂತೆ ಇನ್ನಿತರ ಸದಸ್ಯರು ಅಭಿನಂದಿಸಿದರು
ಸೋಮವಾರ ಬೆಳಿಗ್ಗೆ 10ಕ್ಕೆ ಆರಂಭವಾಗಿ ಮಧ್ಯಾಹ್ನದ ಭೋಜನ ವಿರಾಮ, ಸಂಜೆಯಲ್ಲಿ 10 ನಿಮಿಷ ಮುಂದೂಡಿಕೆ ಬಳಿಕ ತಡರಾತ್ರಿ 12.55ರ ತನಕ ನಡೆದ ಕಲಾಪ ದಾಖಲೆ ಬರೆದಿದೆ.
ನಿನ್ನೆಯ ಕಲಾಪದಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್, ವಕ್ಫ್ ವಿಚಾರ, ಮುನಿರತ್ನ ಪ್ರಕರಣ ಸದನದಲ್ಲಿ ಹೆಚ್ಚು ಸದ್ದು ಗದ್ದಲಕ್ಕೆ ಕಾರಣವಾಗಿತ್ತು. ಈ ಎಲ್ಲಾ ಗದ್ದಲಗಳ ಮಧ್ಯೆಯೂ ಹಲವು ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ ಆಗಿದೆ.