ಶಿವಮೊಗ್ಗದಿಂದ 180 ಕ್ವಿಂಟಾಲ್ ಶುಂಠಿ ತುಂಬಿಕೊಂಡು ಪಂಜಾಬ್‌ಗೆ ಹೊರಟಿದ್ದ ಲಾರಿ ನಾಪತ್ತೆ!
ಶಿವಮೊಗ್ಗ: ಪಂಜಾಬ್‌ಗೆ 180 ಕ್ವಿಂಟಾಲ್ ಶುಂಠಿ ತುಂಬಿಕೊಂಡು ಹೊರಟ ಲಾರಿ ನಿಗದಿತ ಸ್ಥಳ ತಲುಪದೆ ನಾಪತ್ತೆಯಾಗಿರುವ ಘಟನೆ ಶಿವಮೊಗ್ಗದ ಆಯನೂರಿನಲ್ಲಿ ನಡೆದಿದೆ.
ಸಯ್ಯದ್ ಸಾದಿಕ್ ಎಂಬವರು ಕಳೆದ 8 ವರ್ಷದಿಂದ ಸುತ್ತಮುತ್ತಲ ರೈತರಿಂದ ಶುಂಠಿ ಖರೀದಿಸಿ ವ್ಯಾಪಾರ ಮಾಡುತ್ತಿದ್ದರು. ನ.18ರಂದು ಆಯನೂರಿನಿಂದ 180 ಕ್ವಿಂಟಾಲ್ ಶುಂಠಿಯನ್ನು ಲಾರಿಯಲ್ಲಿ ಪಂಜಾಬ್‌ಗೆ ರವಾನಿಸಿದ್ದರು. ನ.21ರ ರಾತ್ರಿ ಪಂಜಾಬ್‌ನ ಅಮೃತಸರಕ್ಕೆ ಲಾರಿ ತಲುಪಬೇಕಿತ್ತು. ಆದರೆ ನ.21ರ ಬೆಳಗ್ಗೆಯಿಂದ ಲಾರಿ ಚಾಲಕನ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಈ ಮಧ್ಯೆ ಮಧ್ಯಪ್ರದೇಶದ ಝಾನ್ಸಿಯಲ್ಲಿ ಕರ್ನಾಟಕದ ಲಾರಿಯೊಂದರಲ್ಲಿ ಶುಂಠಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ಕೆ.ಜಿ. 50 ರೂ. ನಂತೆ ಮಾರಾಟ ಮಾಡುತ್ತಿರುವುದಾಗಿ ಶುಂಠಿ ಬೆಳೆಗಾರರು ಮತ್ತು ವರ್ತಕರ ಸಂಘದ ವಾಟ್ಸಾಪ್ ಗ್ರೂಪ್‌ನಲ್ಲಿ ಮೆಸೇಜ್ ಬಂದಿತ್ತು. ವಿಚಲಿತರಾದ ವರ್ತಕ ಸಯ್ಯದ್ ಸಾದಿಕ್ ಅಮೃತಸರದಲ್ಲಿರುವ ಟ್ರಾನ್ಸ್‌ಪೋರ್ಟ್ ಕಚೇರಿಗೆ ಕರೆ ಮಾಡಿ ವಿಚಾರಿಸಿದ್ದು ಲಾರಿ ತಲುಪಿಲ್ಲ ಎಂದು ತಿಳಿಸಿದ್ದರು.
ಲಾರಿ ಚಾಲಕ ಮೋಹನ್ ಸೇರಿದಂತೆ ಇಬ್ಬರ ವಿರುದ್ಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದಾಜು 13.77 ಲಕ್ಷ ರೂ. ಮೌಲ್ಯದ 180 ಕ್ವಿಂಟಾಲ್ ಶುಂಠಿ ಪತ್ತೆ ಹಚ್ಚಿಕೊಡುವಂತೆ ಸಯ್ಯದ್ ಸದಾಕ್ ದೂರಿನಲ್ಲಿ ಮನವಿ ಮಾಡಿದ್ದಾರೆ.