ಮಡಿಕೇರಿ | ಇನ್ನೂ ಪತ್ತೆಯಾಗದ ನಿವೃತ್ತ ಯೋಧ; 2ನೇ ದಿನವೂ ಪಂಪಿನಕೆರೆಯಲ್ಲಿ ಮುಂದುವರಿದ ಶೋಧ
ಮಡಿಕೇರಿ ನ.8 : ಮನೆಯಲ್ಲಿ ಡೆತ್‍ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಮಾಜಿ ಸೈನಿಕ, ನಗರದ ಉಕ್ಕುಡ ನಿವಾಸಿ ಸಂದೇಶ್(38) ಎಂಬವರ ಪತ್ತೆಗಾಗಿ 2ನೇ ದಿನವೂ ಪಂಪಿನಕೆರೆಯಲ್ಲಿ ಶೋಧ ಕಾರ್ಯ ನಡೆಸಲಾಯಿತು.
ಉಕ್ಕುಡದ ಪಂಪಿನ ಕೆರೆಯ ದಂಡೆ ಮೇಲೆ ಸಂದೇಶ್ ಅವರಿಗೆ ಸೇರಿದ ಚಪ್ಪಲಿ ಮತ್ತು ವಾಚ್ ಕಂಡು ಬಂದ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಶೋಧ ಕಾರ್ಯ ನಡೆಸಿದರು.
ನಗರ ಪೊಲೀಸ್ ಇಲಾಖೆ ಮನವಿ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬುಧವಾರ ಬೆಳಗ್ಗೆ 9.30 ಗಂಟೆಯಿಂದ ಸಂಜೆವರೆಗೂ ಕೆರೆಯಲ್ಲಿ ಶೋಧ ನಡೆಸಿದರು. ನೀರಿನಲ್ಲಿ ಮುಳುಗಿ ಮೃತಪಟ್ಟ ನೂರಾರು ಮೃತದೇಹಗಳನ್ನು ನೀರಿನ ಆಳ ಪ್ರದೇಶದಿಂದ ಹೊರ ತೆಗೆಯುವ ತಜ್ಞರಾಗಿರುವ ಕುಶಾಲನಗರದ ರಾಮಕೃಷ್ಣ, ಅಗ್ನಿ ಶಾಮಕ ದಳದ ಮುತ್ತಪ್ಪ ಕೂಡ ಮಡಿಕೇರಿಗೆ ಆಗಮಿಸಿ ಪಂಪಿನಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಸಂಜೆ ಕತ್ತಲಿನವರೆಗೂ ನೀರಿನಲ್ಲಿ ಶೋಧ ನಡೆಸಿದರೂ ಸಂದೇಶ್ ಅವರ ಯಾವುದೇ ಸುಳಿವು ಲಭ್ಯವಾಗಿಲ್ಲ.
ಹನಿಟ್ಯ್ರಾಪ್ ಆರೋಪ?
''ಇನ್ನು ನಿವೃತ್ತ ಯೋಧ ಸಂದೇಶ್ ನಾಪತ್ತೆಯಾಗುವ ಮುನ್ನ ಡೆತ್‍ನೋಟ್ ಬರೆದಿಟ್ಟಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ಮಹಿಳೆಯೊಬ್ಬರ ಹೆಸರು ಉಲ್ಲೇಖಿಸಿ ಹನಿಟ್ಯ್ರಾಪ್ ಮಾಡಿ ನನ್ನನ್ನು ಬ್ಲಾಕ್ ಮೇಲ್ ಮಾಡಿದ್ದಾರೆ. ಜೊತೆಗೆ ಆಕೆಯ ತಾಯಿ ಹಾಗೂ ತಂಗಿ ಕೂಡ ಬ್ಲಾಕ್ ಮೇಲ್ ಮಾಡಿದ್ದಾರೆ. ಹಾಗೆ ಆಕೆಯ ಪರಿಚಯಸ್ಥರು ಕೂಡ ನನಗೆ ಟಾರ್ಚರ್ ಮಾಡಿದ್ದಾರೆ'' ಎಂದು ಸಂದೇಶ್ ಡೆತ್‍ನೋಟ್‍ನಲ್ಲಿ ಬರೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.