ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಮಾಲಕನಿಗೆ 15 ಲಕ್ಷ ರೂ.ಹಫ್ತಾ ನೀಡುವಂತೆ ಬೆದರಿಕೆ ಆರೋಪ: ಬಿಜೆಪಿ ಮುಖಂಡನ ಬಂಧನ

Update: 2023-09-21 13:23 GMT

ಬೆಂಗಳೂರು, ಸೆ.21: ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಮಾಲಕನಿಗೆ 15 ಲಕ್ಷ ರೂ. ಹಫ್ತಾ ನೀಡುವಂತೆ ಬೆದರಿಸಿದ ಆರೋಪದಡಿ ಮಾಜಿ ರೌಡಿಶೀಟರ್ ಹಾಗೂ ಬಿಜೆಪಿ ಮುಖಂಡನನ್ನು ಸಂಪಂಗಿರಾಮನಗರ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಸಂಪಂಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಜಿ ರೌಡಿಶೀಟರ್ ಆಗಿರುವ ಆನಂದ್ ಬಂಧಿತ ಆರೋಪಿಯಾಗಿದ್ದಾನೆ. ರಾಜಸ್ಥಾನ ಮೂಲದ ಚೌಧರಿ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಆದೇಶದ ಮೇರೆಗೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ. ಸಿಸಿಬಿ ರೌಡಿ ನಿಗ್ರಹ ದಳದ ಅಧಿಕಾರಿಗಳು ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಆರೋಪಿ ಆನಂದ್ ವಿರುದ್ಧ 2005ರಲ್ಲಿ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿತ್ತು. 2006ರಲ್ಲಿ ರೌಡಿಶೀಟ್ ಪಟ್ಟಿಯಿಂದ ಆತನ ಹೆಸರು ತೆಗೆದುಹಾಕಲಾಗಿತ್ತು. ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದ ಆನಂದ್, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ. ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಸಂಪಂಗಿರಾಮನಗರ ವಾರ್ಡ್‍ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

‘ಮೂರು ತಿಂಗಳ ಹಿಂದೆ ನಾನು ಸಂಪಂಗಿರಾಮನಗರದಲ್ಲಿ ಕಟ್ಟಡ ನಿರ್ಮಿಸುತ್ತಿದ್ದೆ. ಈ ವೇಳೆ ಭೇಟಿ ಮಾಡಿ ಕಟ್ಟಡ ನಿರ್ಮಾಣ ಅಕ್ರಮವಾಗಿದ್ದು, 15 ಲಕ್ಷ ರೂ. ನೀಡದಿದ್ದರೆ ಕಟ್ಟಡವನ್ನು ಧ್ವಂಸಗೊಳಿಸುತ್ತೇವೆ ಎಂದು ಆರೋಪಿ ಆನಂದ್ ತನಗೆ ಧಮ್ಕಿ ಹಾಕಿದ್ದ. ಅಲ್ಲದೆ ಆರ್.ಟಿ.ಐ ಕಾರ್ಯಕರ್ತ ಮಯೂರ್ ವರ್ಮಾ ಕೃತ್ಯದಲ್ಲಿ ಜೊತೆಗೂಡಿ ಕಟ್ಟಡದ ಗುತ್ತಿಗೆದಾರನಿಗೂ ಅವಾಜ್ ಹಾಕಿದ್ದ. ಹಲವು ರೀತಿ ಮಾತುಕತೆ ಬಳಿಕ ನನ್ನನ್ನು ಗಾಂಧಿನಗರಕ್ಕೆ ಕರೆಯಿಸಿಕೊಂಡು 9 ಲಕ್ಷ ರೂ. ನೀಡುವಂತೆ ತಾಕೀತು ಮಾಡಿದ್ದ’ ಎಂದು ಚೌಧರಿ ಅವರು ನಗರ ಪೊಲೀಸ್ ಆಯುಕ್ತರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News