ಗೃಹ ರಕ್ಷಕ ದಳದ ಸಿಬ್ಬಂದಿಯ ಕರ್ತವ್ಯ ಭತ್ಯೆ ಪರಿಷ್ಕರಣೆಗೆ ಕ್ರಮ: ಸಚಿವ ಜಿ. ಪರಮೇಶ್ವರ್ ಭರವಸೆ

Update: 2023-12-12 07:51 GMT

ಬೆಳಗಾವಿ: ‘ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೃಹ ರಕ್ಷಕದಳದ ಸಿಬ್ಬಂದಿಯ ಕರ್ತವ್ಯ ಭತ್ಯೆಯನ್ನು ಪರಿಷ್ಕರಣೆಗೆ ಸರಕಾರ ತಕ್ಷಣವೇ ಕ್ರಮ ವಹಿಸಲಿದೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಶಶಿಕಲಾ ಜೊಲ್ಲೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಒಟ್ಟು 25,882 ಮಂದಿ ಗೃಹ ರಕ್ಷಕ ದಳದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ದಿನದ ಭತ್ಯೆ ಪೊಲೀಸ್ ಇಲಾಖೆ ಬಂದೋಬಸ್ತ್‌ ಗೆ 750 ರೂ.ಗಳನ್ನು ನೀಡಲಾಗುತ್ತಿದೆ. ಅನ್ಯ ಇಲಾಖೆಗಳ ಕೊರಿಕೆ ಮೇರೆಗೆ ನಿಯೋಜಿಸುವ ಸಿಬ್ಬಂದಿಗೆ ದಿನಕ್ಕೆ 600 ರೂ. ನೀಡಲಾಗುತ್ತದೆ.

ಪಹರೆ ನಿರ್ವಹಿಸುವವರಿಗೆ ನಗರದಲ್ಲಿ ದಿನಕ್ಕೆ 455 ರೂ. ಹಾಗೂ ಇತರೆ ಸ್ಥಳಗಳಲ್ಲಿ ದಿನಕ್ಕೆ 380 ರೂ.ನಂತೆ ಭತ್ಯೆ ನೀಡಲಾಗುತ್ತಿದೆ. ಈ ಮೊತ್ತವನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದೆ. ರಾಜ್ಯದಲ್ಲಿ ಒಟ್ಟು 426 ಘಟಕಗಳಲ್ಲಿ 21 ಸಾವಿರಕ್ಕೂ ಅಧಿಕ ಪುರುಷ ಮತ್ತು 4500ಕ್ಕೂ ಅಧಿಕ ಮಹಿಳಾ ಗೃಹ ರಕ್ಷಕ ದಳದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇತರೆ ರಾಜ್ಯಗಳ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಗೃಹ ರಕ್ಷಕ ದಳದ ಸಿಬ್ಬಂದಿ ಕರ್ತವ್ಯ ಭತ್ಯೆ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಶಶಿಕಲಾ ಜೊಲ್ಲೆ, ಅತ್ಯಂತ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಗೃಹ ರಕ್ಷಕ ದಳದ ಸಿಬ್ಬಂದಿ ಸಂಕಷ್ಟದ ಸ್ಥಿತಿಯಲ್ಲಿದ್ದು, ಅವರಿಗೆ ಕರ್ತವ್ಯ ಭತ್ಯೆ ಹೆಚ್ಚಳ ಮಾಡಬೇಕು. ಜೊತೆಗೆ ಅವರನ್ನು ಪೊಲೀಸ್ ಸಿಬ್ಬಂದಿ ನೇಮಕಾತಿಯಲ್ಲಿ ಆದ್ಯತೆ ನೀಡಿಲು ಆಗ್ರಹಿಸಿದರು.

ಪೊಲೀಸ್ ಸಿಬ್ಬಂದಿಗಳಿಗೆ ಶೇ.80ರಷ್ಟು ವಸತಿ ಗೃಹ ನಿರ್ಮಿಸಲು ಆದ್ಯತೆ

ರಾಜ್ಯದಲ್ಲಿನ ಪೊಲೀಸ್ ಸಿಬ್ಬಂದಿಗೆ ಶೇ.40ರಷ್ಟು ವಸತಿ ಗೃಹಗಳನ್ನು ನಿರ್ಮಿಸಿದ್ದು, ಅದನ್ನು ಶೇ.80ರಷ್ಟಕ್ಕೆ ಹೆಚ್ಚಿಸಲು ಸರಕಾರ ಕ್ರಮ ವಹಿಸಲಿದ್ದು, ಎಲ್ಲ ಸಿಬ್ಬಂದಿಗೆ ವಸತಿ ಗೃಹ ಕಲ್ಪಿಸಲು ಆದ್ಯತೆ ನೀಡಲಾಗಿದೆ  ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್  ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಶಾಂತನಗೌಡ ಡಿ.ಜಿ. ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಪೊಲೀಸ್ ಸಿಬ್ಬಂದಿಗೆ ವಸತಿ ಗೃಹ ನಿರ್ಮಿಸಲು ಈ ಹಿಂದೆ ಪೊಲೀಸ್ ಗೃಹ-2020 ಯೋಜನೆ ರೂಪಿಸಿದ್ದು, 15ಸಾವಿರ ವಸತಿ ಗೃಹ ನಿರ್ಮಿಸಲಾಗಿತ್ತು. ಇದೀಗ ಆದೇ ಯೋಜನೆಯನ್ನು ‘ಪೊಲೀಸ್ ಗೃಹ-2025’ರ ವರೆಗೆ ಮುಂದುವರಿಸಲಾಗಿದೆ ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News