ರೈತರ ಅಕ್ರಮ ಕೃಷಿ ಪಂಪ್‍ಸೆಟ್ ಸಕ್ರಮಕ್ಕೆ ಕ್ರಮ: ಸಚಿವ ಕೆ.ಜೆ.ಜಾರ್ಜ್
ಬೆಳಗಾವಿ: ರಾಜ್ಯದಲ್ಲಿ 4 ಲಕ್ಷಕ್ಕೂ ಅಧಿಕ ರೈತರ ಅಕ್ರಮ ಕೃಷಿ ಪಂಪ್‍ಸೆಟ್‍ಗಳ ವಿದ್ಯುತ್ ಸಂಪರ್ಕಗಳನ್ನು 6ಸಾವಿರ ಕೋಟಿ ರೂ.ವೆಚ್ಚದಲ್ಲಿ ಸಕ್ರಮಗೊಳಿಸಬೇಕಿದ್ದು, ಪ್ರಸಕ್ತ ಸಾಲಿನಲ್ಲಿ 80 ಸಾವಿರ ವಿದ್ಯುತ್ ಸಂಪರ್ಕಗಳನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಭರಮಗೌಡ ಕಾಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘2004ರಲ್ಲಿ ಎಚ್.ಡಿ.ರೇವಣ್ಣ ಇಂಧನ ಸಚಿವರಾಗಿದ್ದರು. ಆಗ 60 ಸಾವಿರ ವಿದ್ಯುತ್ ಸಂಪರ್ಕಗಳಿದ್ದವು. ಆ ಪೈಕಿ 30 ಸಾವಿರದಷ್ಟು ಸಂಪರ್ಕಗಳನ್ನು ಸಕ್ರಮ ಮಾಡಿದ್ದರು. 2008ರಲ್ಲಿ ಆ ಸಂಖ್ಯೆ 1.40 ಲಕ್ಷದಷ್ಟಾಗಿದ್ದು, 2008ರಿಂದ 2023ರ ವರೆಗೆ 4ಲಕ್ಷ ಅಕ್ರಮ ಸಂಪರ್ಕಗಳಿವೆ. ಇದೀಗ ಅವುಗಳನ್ನು ಸಕ್ರಮಗೊಳಿಸಲು 6 ಸಾವಿರ ಕೋಟಿ ರೂ.ಗಳ ಅಗತ್ಯವಿದೆ’ ಎಂದು ವಿವರ ನೀಡಿದರು.
500 ಮೀಟರ್ ಅಂತರದ ಒಳಗಿನ ಸಂಪರ್ಕಗಳಿಗೆ ಉಚಿತವಾಗಿ ವಿದ್ಯುತ್ ಕಂಪೆನಿಗಳಿಂದ ತಂತಿ, ಟಿಸಿಗಳನ್ನು ಒದಗಿಸಲಾಗುತ್ತಿದೆ. ಅದಕ್ಕೂ ಮೇಲ್ಪಟ್ಟವುಗಳನ್ನು ಸಕ್ರಮ ಮಾಡಿಸಿಕೊಳ್ಳಲು ರೈತರೇ ವೆಚ್ಚ ಭರಿಸಬೇಕು. ಅತ್ಯಂತ ತುರ್ತಾಗಿ ಸಕ್ರಮಗೊಳಿಸಬೇಕಾದರೆ ಅಂತಹ ಸಂದರ್ಭದಲ್ಲೂ ರೈತರೇ ಆ ವೆಚ್ಚ ಭರಿಸಬೇಕಿದೆ ಎಂದು ಅವರು ವಿವರ ನೀಡಿದರು.
ರಾಜ್ಯದಲ್ಲಿ ಒಂದೆಡೆ ವಿದ್ಯುತ್ ಬೇಡಿಕೆ 8ಸಾವಿರ ಮೆ.ವ್ಯಾ.ನಿಂದ ಇದೀಗ ಆ ಬೇಡಿಕೆ 16 ಸಾವಿರ ಮೆ.ವ್ಯಾಗೆ ಹೆಚ್ಚಾಗಿದೆ. ಮಳೆ ಕೊರತೆಯಿಂದ ಜಲವಿದ್ಯುತ್ ಉತ್ಪಾದನೆ, ಚಳಿಗಾಲ ಮತ್ತು ಮೋಡಗಳಿಂದ ಸೌರ ವಿದ್ಯುತ್ ಉತ್ಪಾದನೆಯೂ ಸ್ಥಗಿತವಾಗಿದೆ. ಇದೇ ವೇಳೆ ಗಾಳಿಯ ಕೊರತೆಯಿಂದ ಪವನ ವಿದ್ಯುತ್ ಉತ್ಪಾದನೆಯೂ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಹೀಗಾಗಿ ನಾವು 1200ಕೋಟಿ ರೂ.ವೆಚ್ಚ ಮಾಡಿ ವಿದ್ಯುತ್ ಖರೀದಿಸಬೇಕಾಯಿತು. ರಾಯಚೂರು ಮತ್ತು ಬಳ್ಳಾರಿಯ ಉಷ್ಣ ವಿದ್ಯುತ್ ಸ್ಥಾವರಗಳನ್ನು ಕಾರ್ಯಾರಂಭಿಸಿದ್ದು, ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ ಎಂದು ವಿವರಿಸಿದರು.
ಶೇ.80ರಷ್ಟು ಸಬ್ಸಿಡಿ: ಕೃಷಿ ಪಂಪ್‍ಸೆಟ್‍ಗಳಿಗೆ ವಾರ್ಷಿಕ 18ರಿಂದ 20 ಸಾವಿರ ಕೋಟಿ ರೂ.ಸಬ್ಸಿಡಿ ವೆಚ್ಚವಾಗುತ್ತಿದೆ. ಇದನ್ನು ತಗ್ಗಿಸಲು ಕೃಷಿ ಪಂಪ್‍ಸೆಟ್‍ಗಳಿಗೆ ಕುಸುಮ್ ಯೋಜನೆಯ ‘ಬಿ ಮತ್ತು ಸಿ’ ಹಂತಗಳಲ್ಲಿ ರಾಜ್ಯದ 30 ಸಾವಿರ ಪಂಪ್‍ಸೆಟ್‍ಗಳಿಗೆ ಸೌರಶಕ್ತಿ ಅಳವಡಿಸಲು ನಿರ್ಧರಿಸಲಾಗಿದೆ. ಇದಕ್ಕೆ ಕೇಂದ್ರ ಶೇ.30ರಷ್ಟು ಹಾಗೂ ರಾಜ್ಯ ಶೇ.50ರಷ್ಟು ಸಬ್ಸಿಡಿ ಸೇರಿದಂತೆ ಒಟ್ಟು ಶೇ.80ರಷ್ಟು ಸಬ್ಸಿಡಿ ನೀಡಲಾಗುವುದು ಎಂದರು.
750 ಮೆ.ಗಾ ಉತ್ಪಾದನೆ: ಉಪಸ್ಥಾವರಗಳ ಬಳಿ ಸೌರ ವಿದ್ಯುತ್ ಉತ್ಪಾದನೆಗೆ ಪ್ರತಿ ಯೂನಿಟ್‍ಗೆ 3.17 ರೂ.ವೆಚ್ಚದಲ್ಲಿ ಟೆಂಡರ್ ನೀಡಲಾಗಿದೆ. ಸುಮಾರು 750ಮೆ.ಗಾ ವಿದ್ಯುತ್ ಮುಂದಿನ ಆರೇಳು ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ. ಸೌರ ವಿದ್ಯುತ್ ಉತ್ಪಾದನೆ ಘಟಕಕ್ಕೆ ಭೂಮಿ ಒದಗಿಸಬೇಕು ಎಂದು ಕಂದಾಯ ಇಲಾಖೆಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.