ನಟ ಸುದೀಪ್ ಮಾನನಷ್ಟ ಮೊಕದ್ದಮೆ ಪ್ರಕರಣ: ಇಬ್ಬರು ನಿರ್ಮಾಪಕರಿಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್
ಬೆಂಗಳೂರು, ಆ.11: ‘ನನ್ನ ಮಾನಹಾನಿಯಾಗಿದೆ‘ ಎಂದು ಆರೋಪಿಸಿ ನಟ ಸುದೀಪ್ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಚಿತ್ರ ನಿರ್ಮಾಪಕ ಎಂ.ಎನ್.ಕುಮಾರ್ ಹಾಗೂ ಎಂ.ಎನ್.ಸುರೇಶ್ ಅವರಿಗೆ ನಗರದ 13ನೆ ಎಸಿಎಂಎಂ ಕೋರ್ಟ್ ಸಮನ್ಸ್ ಜಾರಿಗೊಳಿಸಿ ಆದೇಶಿಸಿದೆ.
ಫಿರ್ಯಾದುದಾರ ಸುದೀಪ್ ಅವರ ಸ್ವಯಂ ಹೇಳಿಕೆಯನ್ನು ಆ.10ರಂದು ದಾಖಲು ಮಾಡಿಕೊಂಡಿದ್ದ ನ್ಯಾಯಾಧೀಶ ವೆಂಕಣ್ಣ ಬಸಪ್ಪ ಹೊಸಮನಿ ಅವರು, ಶುಕ್ರವಾರ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿದ್ದು, ಇದೇ 26ರಂದು ಕೋರ್ಟ್‍ಗೆ ಹಾಜರಾಗುವಂತೆ ಆದೇಶಿಸಿದ್ದಾರೆ.
ನಟ ಸುದೀಪ್ ಈ ಹಿಂದೆ ನನ್ನ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿ, ನನ್ನಿಂದ ಮುಂಗಡ ಹಣ ಪಡೆದಿದ್ದರು. ಆದರೆ ಇದುವರೆಗೂ ಅವರು ಕಾಲ್‍ಶೀಟ್ ಕೊಟ್ಟಿಲ್ಲ. ನನ್ನ ಹಣವನ್ನೂ ವಾಪಸ್ ನೀಡುತ್ತಿಲ್ಲ ಎಂದು ನಿರ್ಮಾಪಕ ಎಂ.ಎನ್.ಕುಮಾರ್ ಆರೋಪಿಸಿದ್ದರು. ಸಮಸ್ಯೆ ಬಗೆಹರಿಸುವಂತೆ ಕೋರಿ ಫಿಲ್ಮ್ ಛೇಂಬರ್ ಮೆಟ್ಟಿಲೇರಿದ್ದರು.
ಇದಕ್ಕೆ ಪ್ರತಿಯಾಗಿ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದು, ‘ಕುಮಾರ್ ಹೇಳಿಕೆಯಿಂದ ನಾನು ಇಷ್ಟು ವರ್ಷಗಳ ಕಾಲ ಕಷ್ಟಪಟ್ಟು ಗಳಿಸಿದ್ದ ವರ್ಚಸ್ಸಿಗೆ ಧಕ್ಕೆಯಾಗಿದೆ. ನನ್ನ ಮಾನಹಾನಿಯಾಗಿದೆ‘ ಎಂದು ಆರೋಪಿಸಿ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.