ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅಂತ್ಯ ಸಂಸ್ಕಾರ

Update: 2023-08-09 14:39 GMT

ಬೆಂಗಳೂರು, ಆ. 9: ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತ್ಯ ಸಂಸ್ಕಾರವನ್ನು ಇಲ್ಲಿನ ಹರಿಚಂದ್ರ ಘಾಟ್‍ನಲ್ಲಿರುವ ಚಿತಾಗಾರದಲ್ಲಿ ನೆರವೇರಿಸಲಾಯಿತು.

ಆರ್ಯ ಈಡಿಗ ಸಂಪ್ರದಾಯದಂತೆ ನಟ ವಿಜಯ್ ರಾಘವೇಂದ್ರ ಹಾಗೂ ಅವರ ಪುತ್ರ ಶೌರ್ಯ ಅಂತ್ಯಕ್ರಿಯೆ ವಿಧಿ ವಿಧಾನಗಳನ್ನು ನೆರವೇರಿಸಿದರು.

ಸ್ಪಂದನಾ ಮೃತದೇಹಕ್ಕೆ ಸಂಪ್ರದಾಯಬದ್ಧವಾಗಿ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರ ವಿಶೇಷವಾಗಿ ತಯಾರಾದ ವಾಹನದಲ್ಲಿ ಪಾರ್ಥಿವ ಶರೀರವನ್ನು ಮಲ್ಲೇಶ್ವರಂನಿಂದ ಹರಿಶ್ಚಂದ್ರ ಘಾಟ್‍ಗೆ ಕೊಂಡೊಯ್ಯದು ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸ್ನೇಹಿತರ ಜೊತೆಗೆ ಸ್ಪಂದನಾ ವಿದೇಶಿ ಪ್ರವಾಸಕ್ಕೆ ತೆರಳಿದ್ದ ವೇಳೆ ಅವರಿಗೆ ಹೃದಯಾಘಾತ ಆಗಿ ನಿಧನರಾಗಿದ್ದಾರೆ. ಆ.8ರ ತಡರಾತ್ರಿ ಸ್ಪಂದನಾರ ಮೃತದೇಹ ಥಾಯ್ಲೆಂಡ್‍ನಿಂದ ಬೆಂಗಳೂರಿಗೆ ತರಲಾಯಿತ್ತು. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1.45ರ ವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ.ಖಾದರ್ ಸೇರಿದಂತೆ ರಾಜಕೀಯ ಪ್ರಮುಖರು, ಚಿತ್ರರಂಗದ ಗಣ್ಯರು ಸ್ಪಂದನಾ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದುಕೊಂಡರು. ಸ್ಪಂದನಾರ ತಂದೆ ಬಿ.ಕೆ.ಶಿವರಾಮ್, ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಪತಿ ವಿಜಯ್ ರಾಘವೇಂದ್ರ ಸೇರಿದಂತೆ ಕುಟುಂಬದ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.

‘ಅಪೂರ್ವ ಎಂಬ ಸಿನಿಮಾದಲ್ಲಿ ನಟಿಸಿದ್ದ ಸ್ಪಂದನಾ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಬಾಳಿ ಬದುಕಬೇಕಾಗಿದ್ದ ಸ್ಪಂದನಾ ಅವರದು ಸುಂದರ ಕುಟುಂಬ. ಥೈಲ್ಯಾಂಡ್ ದೇಶಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಸ್ಪಂದನಾ ಮೃತಪಟ್ಟಿರುವುದು ನೋವಿನ ಸಂಗತಿ. ಬಿ.ಕೆ.ಶಿವರಾಂ ಹಾಗೂ ವಿಜಯ ರಾಘವೇಂದ್ರ ಕುಟುಂಬಕ್ಕೆ ಸ್ಪಂದನಾರ ಸಾವಿನಿಂದ ತುಂಬಲಾರದ ನಷ್ಟವುಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ’

-ಸಿದ್ದರಾಮಯ್ಯ ಮುಖ್ಯಮಂತ್ರಿ

 

 

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News