ಬಿ.ಕೆ. ಹರಿಪ್ರಸಾದ್ ಅವರಿಗೆ ಎಐಸಿಸಿ ಶೋಕಾಸ್ ನೋಟಿಸ್

Update: 2023-09-12 15:40 GMT

ಬೆಂಗಳೂರು, ಸೆ.12: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ಪರೋಕ್ಷ ವಾಗ್ದಾಳಿ ನಡೆಸುವ ಮೂಲಕ ಸರಕಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ ಎಐಸಿಸಿಯ ಶಿಸ್ತು ಸಮಿತಿಯು ಮಂಗಳವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ. 

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಸಿದ್ದರಾಮಯ್ಯ ಅವರ ಹೆಸರು ಉಲ್ಲೇಖಿಸದೆ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದ ಹರಿಪ್ರಸಾದ್, ಹ್ಯೂಬ್ಲೊಟ್ ವಾಚ್, ಅಡ್ವಾಣಿ ನಿವಾಸದಲ್ಲಿ ಉಪಹಾರ ಸೇವನೆ, ನಕಲಿ ಸಮಾಜವಾದ ಪಾಲನೆ ಮಾಡುವವರು ಎಂದೆಲ್ಲ ಟೀಕೆಗಳನ್ನು ಮಾಡಿದ್ದರು.

ಹರಿಪ್ರಸಾದ್ ಹೇಳಿಕೆಯಿಂದಾಗಿ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಸರಕಾರಕ್ಕೆ ಮುಜುಗರವಾಗಿದೆ. ಹಿರಿಯ ನಾಯಕರಾದ ಅವರು ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಈ ರೀತಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡುವುದು ಎಷ್ಟರಮಟ್ಟಿಗೆ ಸರಿ. ಆದುದರಿಂದ, ಅವರಿಗೆ ಎಚ್ಚರಿಕೆ ನೀಡುವಂತೆ ಕೆಲವು ಶಾಸಕರು ಹಾಗೂ ಸಚಿವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಗ್ರಹಿಸಿದ್ದರು.

ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಕೆಲವರು ಹೈಕಮಾಂಡ್‍ಗೆ ದೂರು ನೀಡಿದ್ದಾರೆ ಎಂದು ಹರಿಪ್ರಸಾದ್ ತಿರುಗೇಟು ನೀಡಿದ್ದರು. ಇದೀಗ ಎಐಸಿಸಿ ಶಿಸ್ತು ಸಮಿತಿಯು ನೋಟಿಸ್ ಜಾರಿ ಮಾಡಿದ್ದು, 10 ದಿನಗಳ ಒಳಗೆ ಉತ್ತರಿಸುವಂತೆ ಸೂಚಿಸಿದೆ. 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News