ಅರಣ್ಯ ಭೂಮಿ ಪರಿವರ್ತನೆ ಆರೋಪ: ಅಜಿತ್ ಕುಮಾರ್ ರೈ ಸೇರಿ ಇಬ್ಬರು ಕೆಎಎಸ್ ಅಧಿಕಾರಿಗಳ ವಿರುದ್ಧ ಎಫ್‍ಐಆರ್
ಬೆಂಗಳೂರು, ಅ.20: ಅರಣ್ಯ ಭೂಮಿಯನ್ನು ಪರಿವರ್ತನೆ ಮಾಡಿದ ಆರೋಪದಡಿ ಇಬ್ಬರು ಹಿರಿಯ ಕೆಎಎಸ್ ಅಧಿಕಾರಿಗಳ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಎಫ್‍ಐಆರ್ ದಾಖಲಿಸಿರುವ ಬಗ್ಗೆ ವರದಿಯಾಗಿದೆ.
ಸಹಾಯಕ ಕಮಿಷನರ್(ಎಸಿ) ಎಂ.ಜಿ.ಶಿವಣ್ಣ ಮತ್ತು ತಹಶೀಲ್ದಾರ್ ಅಜಿತ್ ಕುಮಾರ್ ರೈ ವಿರುದ್ಧ ಅರಣ್ಯಾಧಿಕಾರಿಗಳು ಎಫ್‍ಐಆರ್ ದಾಖಲಿಸಿದ್ದು, ಬೆಂಗಳೂರು ಉತ್ತರದ ಯಲಹಂಕದ ಕೊತ್ತನೂರು ಗ್ರಾಮದಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 17.34 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಮಾರ್ಪಡಿಸಿದ ಆರೋಪದ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಕೆ.ಆರ್.ಪುರ ಹೋಬಳಿಯ ಕೊತ್ತನೂರಿನ ಸರ್ವೆ ನಂಬರ್ 47ರಲ್ಲಿರುವ 17 ಎಕರೆ 34 ಗುಂಟೆ ಭೂಮಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಜೂನ್ 2006ರಲ್ಲಿ ಅರಣ್ಯ ಎಂದು ಘೋಷಿಸಿದ್ದರು. ಈ ವಿಷಯವನ್ನು ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಿಲಾಗಿತ್ತು. ಅಲ್ಲಿ ಅರಣ್ಯ ಎಂದು ಘೋಷಿಸಿದ್ದ ಜಿಲ್ಲಾಧಿಕಾರಿಯ ನಿರ್ಧಾರವನ್ನು ಎತ್ತಿಹಿಡಿಯಲಾಗಿತ್ತು.
2023ರ ಜನವರಿಯಲ್ಲಿ ಅಂದಿನ ಸಹಾಯಕ ಕಮಿಷನರ್ ಶಿವಣ್ಣ ಮತ್ತು ತಹಶೀಲ್ದಾರ್ ರೈ ಏಕಪಕ್ಷೀಯವಾಗಿ ಅರಣ್ಯ ಪ್ರದೇಶವನ್ನು ‘ಸರಕಾರಿ ಭೂಮಿ' ಎಂದು ಬದಲಾಯಿಸಿದ್ದರು. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆಗೆ ಆದೇಶಿಸಿದ್ದರು.
ಇಲಾಖೆಯ ವಿಜಿಲೆನ್ಸ್ ವರದಿಯಲ್ಲಿ ಈ ಇಬ್ಬರು ಅಧಿಕಾರಿಗಳು 2006ರ ಆದೇಶವನ್ನು ಉಲ್ಲಂಘಿಸಿರುವ ಬಗ್ಗೆ ಉಲ್ಲೇಖಿಸಲಾಗಿತ್ತು. ಅರಣ್ಯ ಭೂಮಿಯನ್ನು ಕಬಳಿಸುವ ಸಂಚು ನಡೆಯುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಈ ಭೂಮಿಯನ್ನು ವಶಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಅಕ್ರಮ ಬದಲಾವಣೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವರು ಇಲಾಖೆಗೆ ಸೂಚಿಸಿದ ಕೆಲವು ದಿನಗಳ ನಂತರ ಎಫ್‍ಐಆರ್ ದಾಖಲಾಗಿದೆ.
ಇಬ್ಬರು ಹಿರಿಯ ಕೆಎಎಸ್ ಅಧಿಕಾರಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 33 (ಅತಿಕ್ರಮಣ ನಿಷೇಧ), 104 (ನಿಬಂಧನೆಗಳ ಉಲ್ಲಂಘನೆ) ಮತ್ತು 104 ಸಿ (ಅಪರಾಧಕ್ಕೆ ಕುಮ್ಮಕ್ಕು ನೀಡುವ ಕಮಿಷನ್ ವ್ಯವಹರಿಸುತ್ತದೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಗೊತ್ತಾಗಿದೆ.