ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ವಂಚನೆ ಆರೋಪ: ಓರ್ವ ಸೆರೆ

Update: 2023-09-01 13:38 GMT

ಬಂಧಿತ ಆರೋಪಿ 

ಬೆಂಗಳೂರು, ಸೆ.1: ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರಕಾರಿ ಇಂಜಿನಿಯರ್‌ಗಳಿಗೆ ದೂರವಾಣಿ ಕರೆ ಮಾಡಿ ದಾಳಿ ಮಾಡಿಸುವುದಾಗಿ ಬೆದರಿಸಿ, ಹಣ ಪಡೆದು ವಂಚಿಸುತ್ತಿದ್ದ ಪ್ರಮುಖ ಆರೋಪಿಯ ಸಹಚರನನ್ನು ಇಲ್ಲಿನ ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಬೆಳಗಾವಿ ಮೂಲದ ಸಂತೋಷ್ ಕೊಪ್ಪದ್ ಬಂಧಿತ ಆರೋಪಿ. ಪ್ರಮುಖ ಆರೋಪಿ ವಿಶಾಲ್ ಪಾಟೀಲ್ ಎಂಬಾತ ಪರಾರಿಯಾಗಿದ್ದು, ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯನ್ನು 2020ರಲ್ಲಿ ವಂಚನೆ ಪ್ರಕರಣದಡಿ ಬೆಳಗಾವಿಯ ಬೈಲಹೊಂಗಲ ಪೊಲೀಸರು ಬಂಧಿಸಿದ್ದರು. ಜಾಮೀನು ಪಡೆದು ಹೊರಬಂದು ಮತ್ತೆ ಹಳೆಯ ಚಾಳಿ ಮುಂದುವರೆಸಿದ್ದಾನೆ. ಸದ್ಯ ನಾಪತ್ತೆಯಾಗಿರುವ ಆರೋಪಿ ವಿಶಾಲ್ ಪಾಟೀಲ್, ಈ ಹಿಂದೆ ಎಸಿಬಿ ಅಧಿಕಾರಿ ಸೋಗಿನಲ್ಲಿ ಸರಕಾರಿ ಇಂಜಿನಿಯರ್‌ಗಳನ್ನು ಗುರಿಯಾಗಿಸಿಕೊಂಡು ಅವರಿಗೆ ಕರೆ ಮಾಡಿ ದಾಳಿ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿದ್ದ.

ಎಸಿಬಿ ರದ್ದತಿ ಬಳಿಕ ಲೋಕಾಯುಕ್ತ ಡಿವೈಎಸ್ಪಿ ಹೆಸರಿನಲ್ಲಿ ವಂಚನೆ ಗಾಳ ಮುಂದುವರೆಸಿದ್ದಾನೆ. ಸರಕಾರಿ ಇಂಜಿನಿಯರ್‌ಗಳಿಗೆ ಕರೆ ಮಾಡಿ ಕಳಪೆ ಕಾಮಗಾರಿ, ಅಕ್ರಮ ಆಸ್ತಿ ಗಳಿಸಿದ್ದೀರಾ ಎಂದು ಹೇಳಿ ರೈಡ್ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದ. ಬೆದರಿಕೆಗಳಿಗೆ ಮಣಿದು ಅಧಿಕಾರಿಗಳು ಹಣ ಕೊಡುತ್ತಿದ್ದರು. ಹಣ ಸಂಗ್ರಹಿಸುವುದಾಕ್ಕಾಗಿಯೇ ಸಂತೋಷ್ ಕೊಪ್ಪದ್ ಎಂಬಾತನನ್ನು ನೇಮಿಸಿಕೊಂಡಿದ್ದ. ಇತ್ತೀಚೆಗೆ ಲಿಂಗಸೂರು, ಕುಷ್ಠಗಿ ವಿಭಾಗದ ಇಂಜಿನಿಯರ್‌ಗಳಿಗೆ ಲೋಕಾಯುಕ್ತ ಡಿವೈಎಸ್ಪಿ ಎಂದು ಹೇಳಿ ದಾಳಿ ಮಾಡಿಸುವುದಾಗಿ ನಂಬಿಸಿ ವಿಧಾನಸೌಧ ಸುತ್ತಮುತ್ತ ಕರೆಯಿಸಿಕೊಂಡು ಹಣ ಪಡೆದುಕೊಂಡಿದ್ದ.

ಹಣ ಕೊಟ್ಟರೆ ಕೇಸ್ ಕ್ಲೋಸ್ ಮಾಡ್ತೀವಿ ಎಂದು ಹುಸಿ ಭರವಸೆ ನೀಡಿದ್ದ. ಈ ಬಗ್ಗೆ ಅನುಮಾನಗೊಂಡ ಸರಕಾರಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಹಣ ನೀಡುವುದಾಗಿ ಕರೆಯಿಸಿಕೊಂಡು ಸಂತೋಷ್ ಕೊಪ್ಪದ್‌ನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News