ಪರವಾನಗಿ ನವೀಕರಿಸದ ಆರೋಪ: ಪವರ್‌ ಟಿ.ವಿ ಪ್ರಸಾರ ಸ್ಥಗಿತಕ್ಕೆ ಹೈಕೋರ್ಟ್‌ ಆದೇಶ

Update: 2024-06-26 06:46 GMT

ಬೆಂಗಳೂರು:ಲೈಸೆನ್ಸ್ ನವೀಕರಿಸದ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪವರ್‌ ಟಿವಿ ಕೂಡಲೇ ತನ್ನ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸಬೇಕೆಂದು ಹೈಕೋರ್ಟ್‌ ಆದೇಶಿಸಿದೆ.

ಕೇಂದ್ರ ವಲಯದ ಐಜಿ ಬಿ.ಆರ್‌ ರವಿಕಾಂತೇಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌ಎಂ ರಮೇಶ್‌ ಗೌಡ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್‌ ಅವರಿದ್ದ ಏಕಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ.

ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯಿದೆ - 1995ರ ಆದೇಶ ಉಲ್ಲಂಘಿಸಿರುವ ಕಾರಣ ತಕ್ಷಣದಿಂದಲೇ ತಮ್ಮ ಚಾನೆಲ್‌ನಲ್ಲಿ ಸುದ್ದಿಗಳೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಜುಲೈ 8ರವರೆಗೆ ಪ್ರಸಾರ ಮಾಡಬಾರದು ಎಂದು ಕರ್ನಾಟಕ ಹೈಕೋರ್ಟ್‌ ಕಠಿಣ ಸೂಚನೆ ನೀಡಿದೆ.

ಪ್ರಕರಣದ ಪ್ರತಿವಾದಿಯಾದ ಪವರ್‌ ಟಿವಿಯ ಮಾತೃ ಸಂಸ್ಥೆ ಮೆಸರ್ಸ್‌ ಪವರ್‌ ಸ್ಮಾರ್ಟ್‌ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯ ಪ್ರತಿನಿಧಿಯಾಗಿರುವ ಹೆಚ್ಚುವರಿ ನಿರ್ದೇಶಕ ರಾಕೇಶ್‌ ಸಂಜೀವ ಶೆಟ್ಟಿ ಅಲಿಯಾಸ್‌ ರಾಕೇಶ್‌ ಶೆಟ್ಟಿಗೆ ಕರ್ನಾಟಕ ಹೈಕೋರ್ಟ್‌ ನಿರ್ದೇಶನ ನೀಡಿ ಆದೇಶ ಹೊರಡಿಸಿದೆ.

ಅರ್ಜಿದಾರರ ಪರ ಹೈಕೋರ್ಟ್‌ನ ಹಿರಿಯ ವಕೀಲರಾದ ಪ್ರಭುಲಿಂಗ ಕೆ ನಾವಡಗಿ, ಸಂದೇಶ್‌ ಜೆ ಚೌಟ ಹಾಗೂ ಡಿಆರ್‌ ರವಿಶಂಕರ್‌ ವಾದ ಮಂಡಿಸಿ, "ಪ್ರತಿವಾದಿ ರಾಕೇಶ್‌ ಶೆಟ್ಟಿ, ಅರ್ಜಿದಾರರ ವಿರುದ್ಧ ಮಾನಹಾನಿಕರ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ. ವಾಸ್ತವದಲ್ಲಿ ಅವರು ಚಾನೆಲ್‌ ಅನ್ನು ಕಾನೂನು ಬಾಹಿರವಾಗಿ ನಡೆಸುತ್ತಿದ್ದಾರೆ. 2021ರಿಂದಲೂ ಚಾನೆಲ್‌ ಪರವಾನಗಿ ನವೀಕರಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ವಾದ ಆಲಿಸಿದ ನ್ಯಾಯಪೀಠ ಮೇಲಿನ ಆದೇಶ ಹೊರಡಿಸಿ, ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News