ಪಾಕಿಸ್ತಾನ ಪರ ಘೋಷಣೆ ಆರೋಪ; ಚುನಾವಣೆಯ ಸೋಲಿನ ಹತಾಶೆಯಿಂದ ಬಿಜೆಪಿಗರು ಘಟನೆಯನ್ನು ತಿರುಚುತ್ತಿದ್ದಾರೆ: ಡಿ.ಕೆ. ಶಿವಕುಮಾರ್

Update: 2024-02-28 09:34 GMT

ಬೆಂಗಳೂರು, ಫೆ. 28: "ವಿಧಾನಸೌಧದಲ್ಲಿ ಯಾರೂ ಪಾಕಿಸ್ತಾನ ಝಿಂದಾಬಾದ್ ಎಂದು ಕೂಗಿಲ್ಲ. ಒಂದು ವೇಳೆ ಕೂಗಿದ್ದರೆ ಪೊಲೀಸರು ಅವರನ್ನು ಒದ್ದು ಒಳಗೆ ಹಾಕುತ್ತಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬುಧವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, "ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿಯವರು ಇದನ್ನು ತಿರುಚುತ್ತಿದ್ದಾರೆ. ಚುನಾವಣೆಯಲ್ಲಿ ಸೋಲಿನ ಹತಾಶೆಯಿಂದ ಈ ರೀತಿ ಮಾಡುತ್ತಿದ್ದಾರೆ. ಈ ವಿಚಾರವಾಗಿ ತನಿಖೆ ಮಾಡುವಂತೆ ನಾವು ಸೂಚಿಸಿದ್ದೇವೆ. ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಪೊಲೀಸರು ಕಾನೂನು ರೀತಿಯ ಕ್ರಮ ಕೈಗೊಳ್ಳಲಿದ್ದಾರೆ. ಒಂದು ವೇಳೆ ಸುಳ್ಳು ಹಬ್ಬಿಸಿದ್ದರೆ, ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು" ಎಂದರು.

ಹಿಮಾಚಲ ಪ್ರದೇಶಕ್ಕೆ ವೀಕ್ಷರಾಗಿ ತೆರಳುತ್ತಿರುವ ಬಗ್ಗೆ ಕೇಳಿದಾಗ, "ನಾನು ಅಲ್ಲಿಗೆ ಹೋಗುವ ಬಗ್ಗೆ ಕಾಂಗ್ರೆಸ್ ಪಕ್ಷ ನನಗೆ ಸೂಚನೆ ನೀಡಿದ್ದು, ಅದರಂತೆ ತೆರಳುತ್ತಿದ್ದೇನೆ. ಎರಡು ಮೂರು ರಾಜ್ಯಗಳಲ್ಲಿ ಸರ್ಕಾರ ಕೆಡವಲು ಬಿಜೆಪಿ ಆತುರದಲ್ಲಿದೆ. ಪ್ರಜಾಪ್ರಭುತ್ವದಲ್ಲಿ ಬಲಿಷ್ಠ ವಿರೋಧ ಪಕ್ಷ ಇರಬೇಕು. ಈ ದೇಶದಲ್ಲಿ ಕೆಟ್ಟ ಸಂಪ್ರದಾಯವನ್ನು ಬಿಜೆಪಿ ಪಾಲಿಸುತ್ತದೆ. ನಮ್ಮ ಪಕ್ಷದ ಎಲ್ಲಾ ಶಾಸಕರು ನಮ್ಮ ಜತೆಯೇ ಇರುತ್ತಾರೆ. ಪಕ್ಷಕ್ಕೆ ನಿಷ್ಠರಾಗಿ ಇರುತ್ತಾರೆ ಎಂಬ ನಂಬಿಕೆ ನನಗಿದೆ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News