‘ಆತಿಥ್ಯಕ್ಕೆ ಐಎಎಸ್ ಅಧಿಕಾರಿ’ಗಳ ಬಳಕೆ ಆರೋಪ; ಮುಖ್ಯ ಕಾರ್ಯದರ್ಶಿಯವರಿಂದ ವರದಿ ಕೇಳಿದ ರಾಜ್ಯಪಾಲರು
ಬೆಂಗಳೂರು, ಜು. 23: ಬೆಂಗಳೂರು ನಗರದಲ್ಲಿ ಆಯೋಜಿಸಲಾಗಿದ್ದ ಪ್ರತಿಪಕ್ಷಗಳ ನಾಯಕರ ಸಭೆಗೆ ಐಎಎಸ್ ಅಧಿಕಾರಿಗಳ ನಿಯೋಜನೆಗೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ಆರೋಪದ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಂದ ವರದಿ ಕೇಳಿದ್ದಾರೆ.
ಪ್ರತಿಪಕ್ಷಗಳ ನಾಯಕರ ಆತಿಥ್ಯಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್‍ನ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿಗೆ ಕೂಡಲೇ ವರದಿ ನೀಡುವಂತೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆತಿಥ್ಯಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂಬ ವಿಚಾರ ವಿಧಾನ ಮಂಡಲ ಉಭಯ ಸದನಗಳಲ್ಲಿಯೂ ಪ್ರತಿಧ್ವನಿಸಿತ್ತು. ಧರಣಿ ಸತ್ಯಾಗ್ರಹದ ವೇಳೆ ಗದ್ದಲ ಮಾಡಿದ ಬಿಜೆಪಿಯ 10 ಮಂದಿ ಶಾಸಕರನ್ನು ಅಮಾನತು ಮಾಡಿದ್ದರು. ಅಮಾನತು ಮಾಡಿರುವುದನ್ನು ಖಂಡಿಸಿ, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಸದನ ಕಲಾಪವನ್ನ ಬಹಿಷ್ಕರಿಸಿದ್ದರು.