ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಅನಿವಾರ್ಯ: ಜೆಡಿಎಸ್ ಹಿರಿಯ ಶಾಸಕ ಜಿ.ಟಿ.ದೇವೇಗೌಡ

Update: 2023-09-09 07:32 GMT

ಮೈಸೂರು,ಸೆ.8: ಕಾಂಗ್ರೆಸ್ ನವರ ದಬ್ಬಾಳಿಕೆಯಿಂದ ಬಿಜೆಪಿ ಜೊತೆ ಮೈತ್ರಿಗೆ ಜೆಡಿಎಸ್ ಪಕ್ಷ ಒಲವು ತೋರಿದೆ ಎಂದು ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. 

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಏನಾದರೂ ಮಾಡಿಕೊಳ್ಳಲಿ. ಆದರೆ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಹೊಂದಾಣಿಕೆ ಮಾಡಿಕೊಳ್ಳುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಲ್ಲಿ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಈಚೆಗೆ ನಡೆದ ಪಕ್ಷದ ಸಭೆಯಲ್ಲಿ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಮುಖಂಡರು ಭಾಗವಹಿಸಿದ್ದೆವು. ಸೆ.10ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಯಿತು. ಕಾಂಗ್ರೆಸ್‍ನವರ ದಬ್ಬಾಳಿಕೆಯ ಬಗ್ಗೆ ಜನಪ್ರತಿನಿಧಿಗಳು ಅಳಲು ತೋಡಿಕೊಂಡರು. ಪಿರಿಯಾಪಟ್ಟಣದಲ್ಲಿ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಲು ಎಫ್‍ಐಆರ್ ದಾಖಲಿಸಲಾಗುತ್ತಿದೆ. ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ. ಕಾರ್ಯಕರ್ತರಿಗೆ ರಕ್ಷಣೆ ಸಿಗುತ್ತಿಲ್ಲ. ಗ್ಯಾರಂಟಿಗಳ ಕಾರಣದಿಂದಾಗಿ ಅಭಿವೃದ್ಧಿ ಕುಂಠಿತವಾಗುತ್ತಿದೆ. ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಬೇಕು. ಆದ್ದರಿಂದ ಬಿಜೆಪಿ ಜೊತೆ ಮೈತ್ರಿಗೆ ಒಲವು ವ್ಯಕ್ತವಾಯಿತು ಎಂದರು.

ಕಾಂಗ್ರೆಸ್ ಜೊತೆ ಹೋಗಲು ನಮಗೆ ಇಷ್ಟವಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರನ್ನು ಹೊಟ್ಟೆ ಉರಿಯಿಂದಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಕಾಂಗ್ರೆಸ್ ಹೊಡೆತ ತಡೆಯಲಾಗುತ್ತಿಲ್ಲ. ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಬೇಕು ಎನ್ನುವ ಅಭಿಪ್ರಾಯ ಬಂತು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಎಚ್.ಡಿ. ದೇವೇಗೌಡರು ನಮಗೆ ಧೈರ್ಯ ತುಂಬಿದ್ದರು? ಎಂದು ತಿಳಿಸಿದರು.

ಸೆ. 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶದ ಮೂಲಕ ಪಕ್ಷದ ಶಕ್ತಿ ಪ್ರದರ್ಶನ ನಡೆಯಲಿದೆ. ಕುಮಾರಸ್ವಾಮಿ ಅವರಿಗೆ ಬಿಜೆಪಿ ಬಗ್ಗೆ ಯಾವುದೇ ವಿರೋಧವಿಲ್ಲ. ನಾನು ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯದ ಪರ ಇರುತ್ತೇನೆ. ಹಿಂದೆ ಬಿಜೆಪಿಗೆ ಹೋಗಿದಕ್ಕೆ ಜನರು ನನ್ನನ್ನು ಸೋಲಿಸಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಈಗ ಮೈತ್ರಿಗೆ ಯಾರೂ ವಿರೋಧ ಮಾಡುತ್ತಿಲ್ಲ. ಕಾಂಗ್ರೆಸ್ ವಿರುದ್ಧ ಇದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News