ಜಾತ್ಯಾತೀತ ಎಂದು ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಮೈತ್ರಿ: ಜೆಡಿಎಸ್ ವಿರುದ್ಧ ಸಿಎಂ ವಾಗ್ದಾಳಿ
ಹುಬ್ಬಳ್ಳಿ, ಸೆ. 9: ‘ಜೆಡಿಎಸ್, ಬಿಜೆಪಿಯ ‘ಬಿ’ ಟೀಂ ಎಂಬುದು ಸತ್ಯವಾಗುತ್ತಿದೆಯೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಜೆಡಿಎಸ್ ಬಿಜೆಪಿಯ ‘ಬಿ’ ಟೀಂ ಎಂದು ಹೇಳಿದಾಗ ಅವರು ನನ್ನ ಮೇಲೆ ಸಿಟ್ಟಾಗಿದ್ದರು. ಜನತಾ ದಳ ಜಾತ್ಯಾತೀತ ಎಂದು ಹೆಸರಿಟ್ಟುಕೊಂಡಿರುವ ಪಕ್ಷ, ಈಗ ಕೋಮುವಾದಿಗಳ ಜೊತೆ ಒಗ್ಗೂಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಯಾವ ಕಾರಣಕ್ಕೂ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆ ಸೇರಿಕೊಳ್ಳುತ್ತಿರುವುದಾಗಿ ಶಾಸಕ ಜಿ.ಟಿ.ದೇವೇಗೌಡ ಹೇಳಿರುವುದು, ಜೆಡಿಎಸ್ ಪಕ್ಷಕ್ಕೆ ಯಾವುದೆ ಸಿದ್ಧಾಂತ ಇಲ್ಲ ಎಂದು ತೋರಿಸುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿಯಾಗಬೇಕೆಂದು ಪಕ್ಷದ ಅಭಿಮಾನಿಗಳು ಆಶಿಸುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಪ್ರಧಾನಿಯಾಗಬಹುದು. ಅಭಿಮಾನಿಗಳು ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಿಂದ ನೇರವಾಗಿ ಪ್ರಧಾನಮಂತ್ರಿ ಆದರು. ನನಗೆ ರಾಷ್ಟ್ರ ರಾಜಕಾರಣದಲ್ಲಿ ಯಾವುದೆ ಆಸಕ್ತಿಯಿಲ್ಲ ಎಂದು ಅವರು ತಿಳಿಸಿದರು.
ಜಿ20 ಸಭೆಗೆ ಆಹ್ವಾನಿಸದಿರುವುದು ತಪ್ಪು: ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಜಿ20 ಸಭೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಂದ್ರ ಸರಕಾರ ಆಹ್ವಾನ ನೀಡದೆ ಇರುವುದು ತಪ್ಪು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.