ಪ್ರಜ್ವಲ್ ರೇವಣ್ಣಗೆ ವಿಡಿಯೋ ಮಾಡಲು ಅಮಿತ್ ಶಾ ಹೇಳಿರಬೇಕು : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಅಮಿತ್ ಶಾ ಅಥವಾ ಬಿಜೆಪಿಯವರೇ ಪ್ರಜ್ವಲ್ ರೇವಣ್ಣಗೆ ವಿಡಿಯೋ ಮಾಡಿ ಹೊರಗೆ ಬಾ ಎಂದಿರಬೇಕು. ಇವರಿಗೆ ವಿದೇಶದಲ್ಲಿ ಉಳಿದುಕೊಳ್ಳುವಂಥದ್ದು ಏನಿದೆ?. ಇದೆಲ್ಲವೂ ಕೂಡ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ನಡೆದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬುಧವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,"ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಂಧಿಸಲು 30 ದಿನ ಬೇಕಾ?. ಪ್ರಜ್ವಲ್ ಅಷ್ಟು ಕ್ಲೀನ್ ಆಗಿದ್ದರೆ, ಮೊದಲ ದಿನವೇ ಪ್ರತಿಕ್ರಿಯೆ ನೀಡಬೇಕಿತ್ತು. ಕುಂಭಕರ್ಣ ನಿದ್ರೆಯಿಂದ ಎದ್ದಮೇಲೆ ರಾಹುಲ್ ಗಾಂಧಿ.. ರಾಹುಲ್ ಗಾಂಧಿ.. ಅಂದ್ರೆ ಹೇಗೆ "ಎಂದು ಟೀಕಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಎಲ್ಲರನ್ನು ಬಿಟ್ಟು ಕೇವಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಿದ್ದಾರೆ. ಅಂದರೆ ಇದರ ನಿರ್ದೇಶಕರಾಗಿ ಅಮಿತ್ ಶಾ ಇದ್ದಿರಬಹುದು. ಮೊನ್ನೆ ಪ್ರಜ್ವಲ್ ವಿಡಿಯೋ ರಿಲೀಸ್ ಮಾಡಿದ್ದು ನೋಡಿ ಆಶ್ಚರ್ಯವಾಯ್ತು. ಆರೇಳು ಹಂತದ ಚುನಾವಣೆ ಮುಗಿದ ಮೇಲೆ ಹೊರ ಬಂದ್ರಾ?. 30 ದಿನಗಳ ಹಿಂದೆ ನಿಮ್ಮ ಸ್ವಾಭಿಮಾನ ಮರ್ಯಾದೆ ನೆನಪಿರಲಿಲ್ವಾ?. ಸಲೂನ್‍ಗೆ ಹೋಗಿ ಕ್ಲೀನ್ ಆಗಿ ಬಂದು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಖಿನ್ನತೆ ಏನಾದರೂ ಕಾಣ್ತಾ ಇದೆಯಾ?. ಇವರಿಗೆ ಖಿನ್ನತೆ ಆಗಿದ್ದರೆ ಸಂತ್ರಸ್ತೆಯರ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದರು.